Sunday, June 21, 2015

ಕೆರೆ ತೊಣ್ಣೂರು ಪ್ರವಾಸ (Thonnur Lake travelogue)

ಕೆರೆ ತೊಣ್ಣೂರು ಪ್ರವಾಸ


ಕಲ್ಲಹಳ್ಳಿಯ ಭೂವರಾಹ ಸ್ವಾಮಿಯ ದರ್ಶನ ಪಡೆದು ನಮ್ಮ ಪಯಣ ಕೆರೆತೊಣ್ಣೂರಿನತ್ತ ಸಾಗಿತು. ತೊಣ್ಣೂರಿನಲ್ಲಿ ಮೊದಲು ಕೆರೆಯ ಬಳಿಗೆ ಹೋದೆವು. ಅಲ್ಲಿ ಜನಗಳ ದಂಡೇ ನೆರೆದಿತ್ತು ಹಿಂದೂ ಮುಸ್ಲಿಂ ಭೇದವಿಲ್ಲದೆ. ಬಹು ವಿಶಾಲವಾದ ಕೆರೆ. ಕೆರೆ ಎನ್ನುವುದಕ್ಕಿಂತಲೂ ಸಮುದ್ರ ಎನ್ನುವುದೇ ಲೇಸು. ಅದಕ್ಕೆಂದೇ ಇರಬೇಕು ಅದನ್ನು ಯಾದವ ಸಮುದ್ರ ಎನ್ನುತ್ತಾರೆ. ಇತಿಹಾಸದಲ್ಲಿ ಅದು ಎಂದೂ ಬತ್ತಿದ್ದಿಲ್ಲವಂತೆ. ಯಾವಾಗಲೂ ತುಂಬಿ ತುಳುಕುತ್ತಿರುವುದಂತೆ. ಈಚೆಗೆ ಕೆ.ಆರ್.ಎಸ್ ನ ನೀರಿನ ಸಂಪರ್ಕವನ್ನೂ ಕಲ್ಪಿಸಿದ್ದಾರೆ. ಅಂದ ಮೇಲೆ ಕೇಳಬೇಕೆ ಅದರ ಸೊಭಗನ್ನು. ನಮ್ಮ ಜನರ ಮನೋ ವರ್ತನೆ ಕೇಳಬೇಕೆ? ಅಲ್ಲೇ ಏನೆಲ್ಲ ತಿಂದು ಎಲ್ಲವನ್ನೂ ಅಲ್ಲೇ ಬಿಸಾಕಿ ಏನೊಂದೂ ಯೋಚನೆ ಇಲ್ಲದೇ ಅಲ್ಲಿನ ಪರಿಸರ ಹಾಳುಮಾಡುತ್ತಾ ತಮಗೆ ಸಂಬಂಧವಿಲ್ಲದಂತೆ ಅಡ್ಡಾಡುತ್ತಿರುತ್ತಾರೆ. ಅದರ ಪಾವಿತ್ರತೆಯಂತೂ ದೂರವೇ ಉಳಿಯಿತು. ಅಲ್ಲಿ ಇದರ ಬಗ್ಗೆ ಕಾಳಜಿ ವಹಿಸಿ ಹೇಳುವವರು, ಕೇಳುವವರು ಯಾರೂ ಇಲ್ಲ. ಈ ಸ್ಥಿತಿ ಯಾರನಾದರೂ ನೊಂದುಕೊಳ್ಳುವಂತೆ ಮಾಡುತ್ತದೆ. ಸ್ಥಳೀಯ ಪಂಚಾಯಿತಿ ಆಡಳಿತವಾಗಲೀ, ಪ್ರವಾಸೋದ್ಯಮ ಇಲಾಖೆಯಾಗಲೀ ಇದರತ್ತ ಸ್ವಲ್ಪ ಗಮನ ವಹಿಸಿ ಕ್ರಮ ಕೈಗೊಂಡಿದ್ದೇ ಆದರೆ ಇಲ್ಲೇ ಸ್ವರ್ಗ ಸೌಂದರ್ಯವನ್ನು ಸವಿಯಬಹುದಾಗಿದೆ. ಆ ದಿನಗಳಿಗಾಗಿ ಕನಸು ಕಾಣುವುದೇ ನಮ್ಮ ಜಾಯಮಾನವಲ್ಲವೇ?

ನಮ್ಮ ಈ ಕರ್ಣಾಟಕ ಶಂಕರ, ರಾಮಾನುಜ, ಮಧ್ವ, ಬಸವಣ್ಣ, ಜೈನ ತೀರ್ಥಂಕರರು, ಗುರುನಾನಕ್ ಮುದಲಾದ ಎಲ್ಲ ಮತ ಧರ್ಮ ಸುಧಾರಕರಿಗೂ ತವರುಮನೆಯಲ್ಲವೇ. ಭಗವದ್ರಾಮಾನುಜರು ತಮಿಳುನಾಡಿನಲ್ಲಿ ಅಲ್ಲಿನ ರಾಜ ಕ್ರಿಮಿಕಂಠ-ಚೊಳ ನ ಉಪಟಳ ತಾಳಲಾರದೆ ಕರ್ಣಾಟಕಕ್ಕೆ ಬಂದು ಸುಮಾರು ೧೨ ವರ್ಷಗಳಷ್ಟು ದೀರ್ಘಕಾಲ ಮೇಲುಕೋಟೆ, ತೊಣ್ಣೂರು, ಸಾಲಗ್ರಾಮ ಮುಂತಾದೆಡೆ ತಮ್ಮ ಕರ್ಮಭೂಮಿಯನಾಗಿಸಿಕೊಂಡು ಶಿಷ್ಯರೊಡನೆ ನೆಲೆಸಿ ಧರ್ಮಪ್ರಚಾರದಲ್ಲಿ ತೊಡಗಿ ಸಮಾಜ ಸುಧಾರಣೆಯಲ್ಲಿ ನಿರತರಾಗಿದ್ದರು. ತೊಣ್ಣೂರಿನ ಈ ಕೆರೆ ಮತ್ತು ದೇವಸ್ಥಾನಗಳು ಅವರಿಗೆ ಅತ್ಯಂತ ಪ್ರಿಯವಾಗಿದ್ದವಂತೆ. ಕೆರೆಗೆ ಹೊಂದಿಕೊಂಡಿರುವ ವಿಶಾಲ ಪಂಟಪದಲ್ಲೇ ಜೈನ ಧರ್ಮೀಯನಾದ ರಾಜಾ ಬಿಟ್ಟಿದೇವನು ಶ್ರೀವೈಷ್ಣವ ದೀಕ್ಷೆಯನ್ನು ಪಡೆದು ವಿಷ್ಣುವರ್ಧನನಾದುದಲ್ಲದೇ, ಆದಿಶೇಷಾವತಾರಿಗಳಾದ ರಾಮಾನುಜರು ಸಾವಿರಾರು ಜೈನ ಪಂಡಿತರೊಂದಿಗೆ ಏಕಕಾಲದಾಲ್ಲಿಯೇ ತತ್ವವಾದ ಮಾಡುತ್ತಾ ವಿಜಯಿಗಳಾಗಿ ಅವರೆಲ್ಲರಿಗೂ ಶ್ರೀವೈಷ್ಣವ ದೀಕ್ಷೆ ಕೊಟ್ಟರೆಂಬ ಐತಿಹ್ಯವಿದೆ. ಅದರ ಕುರುಹಾಗಿ ಅಲ್ಲಿನ “ಯೋಗಾನರಸಿಂಹ” ದೇವಾಲಯದಲ್ಲಿ ಗುಹಾಮಂಟಪದಲ್ಲಿ ಯೋಗಸ್ಥರಾಗಿರುವ ರಾಮಾನುಜರ ಭವ್ಯ ಮೂರ್ತಿ ಕಂಗೊಳಿಸುತ್ತಿದ್ದು, ಆದಿಶೇಷ ಸರ್ಪವು ಅವರನ್ನು ಬಳಸಿ ಹೆಡೆಎತ್ತಿರುವ ದೃಶ್ಯ ’ಮೈಜುಮ್’ ಎನ್ನಿಸುತ್ತದೆ.

ಯೋಗಾನರಸಿಂಹ ದೇವಸ್ಥಾನವನ್ನು ಕೃತಯುಗದಲ್ಲಿ ಪ್ರಹ್ಲಾದನು ಕಟ್ಟಿಸಿದ್ದನೆಂದು ಹೇಳುತ್ತಾರೆ. ಅಲ್ಲಿನ ಅರ್ಚಕರು ನರಸ್ಂಹ ವಿಗ್ರಹದ ಬಳಿ ಇರುವ ದಂಡವನ್ನು ನಮಗೆ ತೋರಿಸುತ್ತಾ ಸ್ಪರ್ಶಿಸಿದರು. ಭಗವದ್ದರ್ಶನ ಪೂಜಾದಿ ಕೈಂಕರ್ಯಗಳು ಬಹಳ ಸೊಗಸಾಗಿ ಆಯಿತು.





 ಅಲ್ಲಿಂದ ನಂಬಿನಾರಾಯಣನ ದೇವಳಕ್ಕೆ ಬಂದೆವು. ಅನೇಕ ಕಂಬಗಳಿಂದ ಕೂಡಿ ವಿಶಾಲವದ ಆವರಣ, ವಿಶಾಲವಾದ ಪ್ರಾಂಗಣ, ಶುಕನಾಸಿಗಳಿಂದ ಕಂಗೊಳಿಸುವ ದೇವಸ್ಥಾನ ಬಹಳವೇ ಆಕರ್ಷಕವಾಗಿದೆ. ಶ್ರೀ ಭೂ ಸಮೇತನಾದ ಆ ನಾರಾಯಣನ ಚೆಲುವನ್ನು ಬಣ್ಣಿಸಲು ಪದಗಳಿಲ್ಲ. ಅವನನ್ನು ನಂಬಿ ಕೆಟ್ಟವರಿಲ್ಲ. ಹಾಗಾಗಿ ಅವನು “ನಂಬಿನಾರಾಯಣ”.  ಪೂಜಾದಿಗಳನ್ನು ಮುಗಿಸಿಕೊಂಡು ಪ್ರಸಾದವಾಗಿ ದೊರೆತ ಸಕ್ಕರ್ಪೊಂಗಲ್ಲನ್ನು ಸವಿಯುತ್ತಾ ಗರುಡಗಂಬ ಪುಷ್ಕರಣಿ (ಸಣ್ಣದು, ಜನ ಸಂಪೂರ್ಣವಾಗಿ ಹಾಳುಮಾಡಿದ್ದಾರೆ.) ಪ್ರದಕ್ಷಿಣೆ ಮಾಡಿ ಎದುರಿನಲ್ಲೇ ಇರುವ ಮತ್ತೊಂದು “ಗೋಪಾಲಸ್ವಾಮಿ” ದೇವಸ್ಥಾನಕ್ಕೆ ನಡೆದೆವು.


ಗೋಪಾಲಸ್ವಮಿಯ ದೇವಸ್ಥಾನದ ಮುಂದಾವರಣವು ಗಿಡಮರಗಳಿಂದ ಹಚ್ಚ ಹಸಿರಾಗಿದೆ.ವಿಶಾಲವಾದ ಆವರಣದ ಒಂದು ಭಾಗದಲ್ಲಿ ತುಲಾಭಾರ ಮಂಟಪವಿದೆ.ದೇವಾಲಯದ ಅರ್ಚಾಮೂರ್ತಿ ಭವ್ಯವಾಗಿದೆ.  ಇದೂ ಸಹ ಅತ್ಯಂತ ಪುರಾತನವಾಗಿದ್ದು ಪಾಂಡವ ಧರ್ಮರಾಜ ಪತ್ತೆ ಮಾಡಿದನು ಎಂದು ಹೇಳುತ್ತಾರೆ. ಇಲ್ಲಿನ ಅರ್ಚಾಮೂರ್ತಿ ಶ್ರೀ ಕೃಷ್ಣ ಪಾರ್ಥಸಾರತಿಯಾಗಿ ಕರೆಯಲ್ಪಡುತ್ತಾನೆ. ಇಲ್ಲಿ ಶ್ರೀಕೃಷ್ಣ ವಿಶ್ವರೂಪದರ್ಶನದಲ್ಲಿದ್ದಾನೆ ಎಂದೂ ಹೇಳುತ್ತಾರೆ. ೮ ಅಡಿ ಎತ್ತರ ಮತ್ತು ೫ ಅಡಿ ಅಗವುಳ್ಳ ಈ ಸಾಲಿಗ್ರಾಮ ಮೂರ್ತಿ ಅಕ್ಕ ಪಕ್ಕದಲ್ಲಿ ಶ್ರೀ – ಭೂ ದೇವಿಯರೊಡನೆ ಮೋಹನರೂಪದಲ್ಲಿ ಕಂಗೊಳಿಸುತ್ತಿದ್ದು ಚಿತಾಪಹಾರಿಯಾಗಿದ್ದಾನೆ.




ಪಾರ್ಥಸಾರಥಿಯ ಮೂಲ ವಿಗ್ರಹದ ಮುಂದೆಯೇ ಶ್ರೀ ಕೃಷ್ಣನು ತ್ರಿಭಂಗಿ ರೂಪದಲ್ಲಿ ಕಣ್ಮನ ಸೆಳೆಯುತ್ತಾನೆ. ದೇವಸ್ಥಾನದ ಶೈಲಿ ಚೋಳರಕಾಲದ್ದು ಎನ್ನಲಾಗಿದೆ. ಒಟ್ಟಾರೆ ಸುಂದರ ಶಾಂತ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯದೊಂದಿಗೆ ಪವಿತ್ರತೆ ತುಂಬಿಕೊಂಡು ಹೊರಬಂದು ಗತ ಕಾಲದ ಚರಿತ್ರೆಯ ಹಿಂದೆ ಸುತ್ತಾಡುತ್ತಾ ಇಕ್ಕೆಡೆಗಳಲ್ಲಿಯೂ ಹಸಿರಿನಿಂದ ತುಂಬಿ ಸಂಜೆಯ ತಂಗಾಳಿಯನ್ನು ಅನುಭವಿಸುತ್ತಾ ಬೆಂಗಳೂರಿನ ಕಡೆಗೆ ಪ್ರಯಾಣಸಲು ಮುಂದಾದೆವು. ಗೋಪಾಲಸ್ವಾಮಿ ಮತ್ತು ಯೋಗಾನರಸಿಂಹ ದೇವಾಲಯಗಳಿಗೆ ಒಬ್ಬರೇ ಅರ್ಚಕರಿದ್ದು ಅವರು ಸರದಿಯಮೇಲೆ ಎರಡು ದೇವಸ್ಥಾನಗಳಿಗೆ ಅಡ್ಡಾಡುತ್ತಾ ಪೂಜಾದಿ ಸೇವೆಗಳನ್ನು ಮಾಡುವುದನ್ನು ನೋಡಿದಾಗ ಒಂದು ಕ್ಷಣ ’ಅಯ್ಯೋ ಭಗವಂತಾ ಇದೆಂತಹ ಕಾಲ ಬಂದಿತಪ್ಪಾ” ಎಂದು ನೊಂದುಕೊಳ್ಳುವಂತಾಯಿತು. ಮುಜರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನಗಳಿಗೆ ಇಲಾಖೆ ಇತ್ತ ಗಮನವಹಿಸಿ ಈ ಕೊರತೆಯನ್ನು ಬೇಗನೆ ನೀಗಿಸಲು ಕ್ರಮ ಕೈಗೊಳ್ಳುವಂತಾಗಲಿ ಎಂದು ಹಾರೈಸೋಣವೆ.

ಬೆಂಗಳೂರು ಪಯಣದ ಮಾರ್ಗದ ಇಕ್ಕೆಡೆಗಳಲ್ಲಿ ಕಬ್ಬಿನ ಗದ್ದೆಗಳು ಮಧ್ಯೆ ಮಧ್ಯೆ ಕಬ್ಬಿನ ಗಾಣಗಳು, ಇದನ್ನು ನೋಡುತ್ತಾ ನಮ್ಮ ಬಾಯೂರಿ ನಾಲಿಗೆ ಚಪ್ಪರಿಸುವಂತಾಯಿತು. ಕಬ್ಬಿಣ ಗಾಣದ ಒಂದೆಡೆ ವಾಹನ ನಿಲ್ಲಿಸಿ ಒಳಹೊಕ್ಕೆವು. ಗಾಣ ಆಡುತ್ತಿರಲಿಲ್ಲ. ನಿಂತಿತ್ತು. ಆದರೂ ನಮ್ಮನ್ನು ಕಂಡ ಗಾಣ ಅರೆಯುವವರು ನಮ್ಮನ್ನು ಆದರದಿಂದ ಬರಮಾಡಿಕೊಂಡು ಸಾಕೆನಿಸುವಷ್ಟು ಕಬ್ಬಿನ ಹಾಲನ್ನು ಅರೆದು ಕೊಟ್ಟರು. 
ಲೇಖಕಿ ರಜನಿ
ಸವಿಯಲು ಬಿಸಿ ಬಿಸಿ ಬೆಲ್ಲ ಕೊಟ್ಟರು. ಅಷ್ಟೇ ಅಲ್ಲ ನಮ್ಮ ನೀರಿನ ಬಾಟಲುಗಳಿಗೂ ಕಬ್ಬಿನ ಹಾಲು ತುಂಬಿ ಕೊಟ್ಟರು. ಎಲ್ಲವನ್ನೂ ಹಣದಿಂದಲೇ ಅಳೆಯುವ ಈ ದಿನಗಳಲ್ಲಿ ಈತರದ ನಡಾವಳಿ ಈ ಆದರ ಸತ್ಕಾರಗಳಲ್ಲವೇ ನಮ್ಮ ಕನ್ನಡ ನಾಡಿನ ಸಂಸ್ಕೃತಿಯನ್ನು ಸಾರುವುದು. ನಾವೂ ಸಹ ಸ್ವಲ್ಪ ಬೆಲ್ಲದ ಅಚ್ಚುಗಳನ್ನು ಕೊಂಡು ಅವರಿಗೆ ಧನ್ಯವಾದ ಹೇಳಿ ಮುಂದೆ ಸಾಗಿದೆವು. ಬೆಳಕು ಕರಗಿ ಕತ್ತಲಾಗತೊಡಗಿತ್ತು. ಮತ್ತೆ ನಗರ ಸೇರಿದ ನಾವು ಇನ್ನೂ ಆ ದಿನವನ್ನು ಮೆಲಕು ಹಾಕುತ್ತಿದ್ದೇವೆ.

ಲೇಖಕರು : ಎನ್.ಎಸ್.ರಜನಿ
ಫೋಟೋಗ್ರಾಫಿ : ವಸಿಷ್ಠ
ಕೀಯಿಂಗ್ : ಜಗನ್ನಾಥ

No comments: