Sunday, June 7, 2015

ಹೊಸಹೊಳಲು ಪ್ರವಾಸ - Hosaholalu Travelogue

ಹೊಸಹೊಳಲು ಪ್ರವಾಸ

ಸಂಜೆ ಆಫೀಸಿನಿಂದ ಮನೆಗ ಮಗ ಬರುತ್ತಿದ್ದಂತೆ ಖುಷಿಯಾಗಿ ಹೇಳಿದ  ಅಮ್ಮಾ ನಾಳಿದ್ದು ಭಾನುವಾರ ಒಂದು ಸೊಗಸಿನ ಪ್ರಯಾಣಕ್ಕೆ ತಯಾರಿ ಮಾಡು ಎಂದು.
ಮನೆಯಲ್ಲೇ ಇದ್ದು ಬೋರು ಬೋರೋ ಎಂದು ಆಗಾಗ ಹಾಡುವ ನನಗೆ ಅವನ ಮಾತು ಕೇಳುತ್ತಿದ್ದ ಹಾಗೇ ಕಿವಿ ಚುರುಕಾಯ್ತು.ಎಲ್ಲಿಗೋ ಈ ಬಾರಿ ಎಂದೆ ಉತ್ಸಾಹ ತಡೆಯಲಾರದೆ. ಅದನ್ನ ಆಮೇಲೆ ಹೇಳ್ತೀನಿ, ಸಧ್ಯಕ್ಕೆ ಈಗ ಊಟ ಬದಿಸು ಎಂದು ಕೈಕಾಲು ತೊಳೆಯಲು ಹೋದ. ಸೊಸೆಯನ್ನು ಕರೆದು ತಕ್ಷಣ ಒದರಿದೆ. ಈ ಬಾರಿ ಒಂದು ಪುಟ್ಟ ಪ್ರಯಾಣಕ್ಕೆ ಸಿದ್ಧಮಾಡಿಕೊ. ಮಗುವಿನ ಅಗತ್ಯತೆಗಳ ಚೀಲ ಸಿದ್ದಪಡಿಸಿಕೋ ಎಂದೆ. ಅವಳು ನನ್ನಷ್ಟೇ ಉತ್ಸಾಹಿ, ಹೊರಗಡೆ ತಿರುಗಾಡಿ ಬರುವುದೆಂದರೆ. ಅವಳೂ ಖುಷಿಯಾದಳು.

ಭಾನುವಾರ ಬೆಳಗಿನ ೫:೩೦ ಕ್ಕೆ ಎಲ್ಲರೂ ಹೊರಡ್ಲು ಸಜ್ಜಾದೆವು. ತವೇರಾ ಗಾಡಿ ಆಗಲೇ ಬಂದು ನಿಂತಿತ್ತು. ಎಲ್ಲರೂ ಕುಳಿತ ಹಾಗೇ, ಮಗ ಹೇಳಿದ ಮೈಸೂರು ರೋಡಿಗೆ ಚಲಿಸಿ ಎಂದು. ಈಗಲಾದರೂ ಸಸ್ಪೆನ್ಸ್ ಮುರಿಯೋ ಎಂದೆ  ಆಗ ಬಾಯ್ಬಿಟ್ಟ. ಹೊಸಹೊಳಲು, ಕಲ್ಲಳ್ಳಿ ಭೂವರಾಹ, ಕೆರೆತೊಣ್ಣೂರು, ಅಲ್ಲಿ ಕೆರೆ, ದೇವಸ್ಥಾನಗಳು ನಂತರ ಹಿಂತಿರುಗೋದು ಎಂದ.

ಮೊದಲಿಗೆ ನಾವು ಕೆ ಆರ್ ಪೇಟೆಗೆ ಹೊರೆಟ್ವಿ. ಏಕೆಂದರೆ ನಮಗೆ ಹೊಸಹೊಳಲು ನೋಡುವುದಿತ್ತು.  ಹೊಸಹೊಳಲು ಕೆ ಆರ್ ಪೇಟೆಗೆ ಮೂರು ಮೈಲಿ ದೂರದಲ್ಲಿದೆ.
ನಮಗೆ ಅಲ್ಲಿನ ಮಾಹಿತಿ ಬೋರ್ಡಿನಲ್ಲಿ ಸಿಕ್ಕ ವಿಚಾರವೆಂದರೆ, ಹೊಸಹೊಳಲು ಗಂಗ ಚೋಳರ ರಾಜ್ಯ ಸೀಮೆಯಲ್ಲಿದ್ದು, ನಂತರ ಹೊಯ್ಸಳರ ಕಾಲದಲ್ಲಿ ಒಂದು ಅಗ್ರಹಾರವಾಗಿತ್ತು. ಈ ಚಿಕ್ಕ ಊರು ೧೩ ನೇ ಶತಮಾನದಲ್ಲಿ ನಿರ್ಮಿತಿಯಾದ ಲಕ್ಷ್ಮೀನಾರಾಯಣ ದೇವಾಲಯದಿಂದ ಬಹಳ ಪ್ರಸಿದ್ಧಿ ಪಡೆದಿದೆ. ವಿಜಯನಗರದರಸರ ಕಾಲದಲ್ಲಿ ಈ ಊರಿನ ಸುತ್ತ ಒಂದು ಕೋಟೆ ನಿರ್ಮಾಣವಾಗಿತ್ತು ಎನ್ನಲಾಗಿದೆ.


ಈ ದೇವಾಲಯವನ್ನು ನೋಡಿದ ಕೂಡಲೇ, ಇದು ಹೊಯ್ಸಳ ಶೈಲಿಯ ವಾಸ್ತು ನಿರ್ಮಾಣ ಎಂಬುದು ಯಾರಿಗಾದರೂ ಅನ್ನಿಸುತ್ತದೆ.




ಅಮೋಘವಾದ, ಅತ್ಯಂತ ಸುಂದರವಾದ ನಕ್ಷತ್ರಾಕಾರದ ತಳಕಟ್ಟಡದ ಮೇಲೆ ಭವ್ಯವಾದ ದೇವಾಲಯ ನಿರ್ಮಿತಿಗೊಂಡಿದೆ. ತ್ರಿಕೂಟಾಚಲವಾದ ಈ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಎತ್ತರವಾದ ಜಗಲಿಯ ಮೇಲೆ ಪೂರ್ವಕ್ಕೆ ಮುಖದ್ವಾರವಿದೆ. ಪಶ್ಚಿಮದ ಗರ್ಭಗೃಹಕ್ಕೆ ಮಾತ್ರ ಶುಕನಾಸಿ ಮತ್ತು ವಿಮಾನವಿದೆ. 



ಮಧ್ಯದಲ್ಲಿ ಒಂದು ಸುಂದರವಾದ ಕೆತ್ತನೆಗಳಿಂದ ತುಂಬಿದ ಕಂಬಗಳಿಂದ ಕೂಡಿ ಗುಂಡನೆಯ ನೃತ್ಯಮಂಟಪದೊಂದಿಗೆ ನವರಂಗಮಂಟಪವಿದೆ. ನವರಂಗಕ್ಕೆ ಪೂರ್ವದಲ್ಲಿ ಭದ್ರಮಂಟಪವಿದೆ. ಒಂದೊಂದು ಕಂಬಗಳೂ ವಿಶಿಷ್ಟವಾದ ಕೆತ್ತನೆಗಳಿಂದ ತುಂಬಿವೆ. ಕಂಬಗಳ ಮೇಲ್ಛಾವಣಿಗಳಲ್ಲಿ ಆನೆ, ಕುದುರೆ, ಕಾಲಾಳು, ಬಳ್ಳಿ, ಪೌರಾಣಿಕ ಕಥಾನಕಗಳು ಇವುಗಳ ಶಿಲ್ಪಗಳಿಂದ ದೇವಳದ ಹೊರಮೈ ಕೋಷ್ಠ್ಹಕಗಳು ತುಂಬಿ ಮನ ಸೂರೆಗೊಳ್ಳುತ್ತವೆ. ಇವೆಲ್ಲವೂ ಹೊಯ್ಸಳ ಶೈಲಿಯನ್ನು ಘೋಷಿಸುತ್ತವೆ. ಒಳಗಡೆ ಭುವನೇಶ್ವರಿಗಳೂ ಸಹ ಮಿಥುನ ಶಿಲ್ಪಗಳಿಂದ ಹಾಗೂ ಇತರೆ ಅನೇಕ ಸುಂದರ ವಿನ್ಯಾಸಗಳ ಕೆತ್ತನೆಗಳಿಂದ ತುಂಬಿ ಅತ್ಯಂತ ರಮಣೀಯವಾಗಿವೆ. ದೇವಸ್ಥಾನದ ಶಿಲ್ಪ ವೈಭವ ಯಾವ ಬೇಲೂರು ಅಥವಾ ಹಳೇಬೀಡುಗಳ ಶಿಲ್ಪ ವೈಭವಕ್ಕೆ ಕಡಿಮೆ ಏನೂ ಇಲ್ಲ ಎಂದು ನಮಗೆ ಅನಿಸದೇ ಇರುವುದಿಲ್ಲ. ಸುಂದರ ಆವರಣದಿಂದ ಕಂಗೊಳಿಸುತ್ತಿರುವ ಈ ದೇವಸ್ಥಾನದ ಕರ್ತೃ, ಕಾಲ ಇವುಗಳ ಸರಿಯಾದ ಮಾಹಿತಿ ಇಲ್ಲದಿರುವುದು ಖೇದದ ಸಂಗತಿಯೇ ಸರಿ.ದೇವಸ್ಥಾನದ ಅರ್ಚಕರ ಹೇಳಿಕೆಯ ಪ್ರಕಾರ ಕ್ರಿ.ಶ ೯೪೩  ೧೦೫೦ ರೊಳಗೆ ಈ ದೇವಾಲಯ ನಿರ್ಮಾಣವಾಗಿರಬೇಕು. 

ಮೊದಲನೆಯ ಗರ್ಭಗುಡಿಯಲ್ಲಿ ವೇಣುಗೊಪಾಲ ಮೂರ್ತಿ ಇದೆ. ಇದು ಸಾಲಿಗ್ರಾಮ ಶಿಲೆಯಲ್ಲಿ ಕಡೆಯಲ್ಪಟ್ಟು ಮನಮೋಹಕವಾಗಿದೆ. ಎಲ್ಲ್ಲಾಗರ್ಭಗುಡಿಯ ದ್ವಾರದ ಹೊರ ಮೇಲ್ಭಾಗದಲ್ಲಿ ಒಳಗಿನ ಮೂರ್ತಿಯನ್ನೇ ತದ್ರೂಪವಾಗಿ ಕೆತ್ತಲಾಗಿದೆ. ಆದರೆ ವೇಣುಗೋಪಾಲಸ್ವಾಮಿಯ ಗರ್ಭಗುಡಿಯ ಮೂರ್ತಿ ಹೊರ ದ್ವಾರದ ಮೂರ್ತಿಗಿಂತ ಭಿನ್ನವಾಗಿದೆ. ಅರ್ಚಕರ ಅಂಬೋಣ ಏನೆಂದರೆ ಈಗ್ಗೆ ಸುಮಾರು ೬೦ - ೭೦ ವರ್ಷಗಳ ಮೊದಲು ಮೂಲ ಗರ್ಭಗುಡಿಯ ಮೂರ್ತಿಯನ್ನು ಏನೋ ಕಾರಣದಿಂದ ಕೆ ಅರ್.ಎಸ್ ನದಿಯಲ್ಲಿ ಹಾಕಲಾಗಿ ನಂತರ ಈ ಮೂರ್ತಿಯನ್ನು ಇಲ್ಲಿ ತಂದು ಪ್ರತಿಷ್ಠಾಪಿಸಲಾಗಿದೆ,  ಹೊರ ದ್ವಾರದ ಮೂರ್ತಿಯ ಸುತ್ತಲೂ ತಳಿರು ತೋರಣದಂತೆ ಕಂಡುಬರುವ ಕೆತ್ತನೆ ಅತ್ಯಂತ ಸೂಕ್ಷ್ಮ ಕೆತ್ತನೆಗಳಿಂದ ಸಿರಿನಿಧಿಯಂತೆ ಕಂಗೊಳಿಸುತ್ತದೆ. ಪಕ್ಕದಲ್ಲಿ ಗಣಪತಿಯು ಮಗುವಿನಂತೆ ಕುಳಿತಿರುವ ಭಂಗಿಯ ಶಿಲ್ಪವನ್ನು ನೋಡಬಹುದು.

ಮಧ್ಯಭಾಗದಲ್ಲಿ ಆಳೆತ್ತರದ ಸಾಲಿಗ್ರಾಮಶಿಲೆಯ ನಾರಾಯಣನ ದಿವ್ಯಮೂರ್ತಿ ಕಂಗೊಳಿಸುತ್ತಿದೆ. ಮುಂದಿನ ಕೈಗಳಲ್ಲೇ ಶಂಖ - ಚಕ್ರಧಾರಿಯಾಗಿದ್ದಾನೆ. ಹಿಂದಿನ ಎರಡು ಕೈಗಳಲ್ಲಿ ತಾವರೆ ಹೂವನ್ನು ಪಿಡಿದಿದ್ದಾನೆ. ನಸು ನಗುತ್ತಾ ನಿಂತಿರುವ ಆ ಸುಂದರಭಂಗಿ ಎಂಥಹವರನ್ನೂ ಸೆಳೆಯುತ್ತದೆ. ಸ್ವಾಮಿಗೆ ಪೂಜಾದಿಗಳನ್ನು ಅರ್ಚಕರು ಮಾಡಿದರು. 



ನಂತರ ಪಕ್ಕದಲ್ಲೇ ಲಕ್ಷ್ಮೀನರಸಿಂಹಸ್ವಾಮಿಯ ದಿವ್ಯವಾದ ಮೂರ್ತಿ. ಇಲ್ಲಿನ ವಿಶೇಷವೆಂದರೆ ಇಲ್ಲಿ ಪ್ರಹ್ಲಾದನೂ ಕೈಜೊಡಿಸಿ ನಿಂತಿರುವುದು. ಪ್ರಹ್ಲಾದನ ಈ ಭಂಗಿ ಇಲ್ಲಿ ಮತ್ತು ಆಂದ್ರಪ್ರದೇಶದ ಕದ್ರಿಯಲ್ಲಿರುವ ನರಸಿಂಹ ದೇವಸ್ಥಾನ ಬಿಟ್ಟರೆ ಮತ್ತೆಲ್ಲೂ ಕಾಣಸಿಗುವುದಿಲ್ಲ. ಇದೇ ಇಲ್ಲಿನ ವಿಶೇಷ. ಪ್ರತಿ ಮಂಗಳವಾರ ಮತ್ತು ಭಾನುವಾರ ಪ್ರಹ್ಲಾದ ನರಸಿಂಹರ ದರ್ಶನ ಬಹಳ ಪುಣ್ಯಪ್ರದ ಎಂಬುದು ಅರ್ಚಕರ ಅಂಬೋಣ.

ಎತ್ತರವಾದ ಪಾಣಿಪೀಠದಲ್ಲಿ ಲಕ್ಷ್ಮೀ ಸಮೇತನಾಗಿ ನರಸಿಂಹನು ಕುಳಿತಿರುವ ಹಿಂದೆ ಇರುವ ಪ್ರಭಾವಳಿಯಲ್ಲಿ (ಕಲ್ಲಿನ) ಅವತಾರಗಳ ಕೆತ್ತನೆ ಇದೆಯಂತೆ.



ಅಲ್ಲಿಂದ ಹೊರಗಿನ ಆವರಣಕ್ಕೆ ಬಂದೆವು. ಅಲ್ಲೇ ಸ್ವಾಮಿಯ ಎಡ ಬದಿಯಲ್ಲಿ ಸೌಮ್ಯನಾಯಕಿಯ ಸುಂದರ ಶಿಲಾಮೂರ್ತಿ ಇದೆ. ಅದು ಈಚಿನದು ಅಂದರೆ ಸುಮಾರು ೯೦೦ ವರ್ಷಗಳಷ್ಟು ಹಳೆಯದು ಎಂದು ಅರ್ಚಕರು ತಿಳಿಸಿದರು. ದೇವಸ್ಥಾನದ ಹೊರಗೋಡೆಗಳಲ್ಲಿ ಪೂರ್ಣ ರಾಮಯಣವನ್ನು ಚಿತ್ರದಲ್ಲಿ ಬಿಡಿಸಲಾಗಿದೆ. ಅಮ್ಮನವರ ಪೂಜೆಯನ್ನು ಮುಗಿಸಿಕೊಂಡು ಅಲ್ಲೇ ಇರುವ ಬಾವಿಯನ್ನು ಒಮ್ಮೆ ಪ್ರದಕ್ಷಿಣೆ ಹಾಕಿ ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದು, ಮತ್ತೊಮ್ಮೆ ದೇವಸ್ಥಾನದ ಸಾನಿಧ್ಯದ ರಸಾನುಭವವನ್ನು ಮನದೊಳಗೇ ತುಂಬಿಕೊಂಡು ಸವಿಯುತ್ತಾ ಮುಂದಿನ ಪಯಣಕ್ಕೆ ಹೊರಟೆವು.


ಲೇಖಕರು : ಎನ್.ಎಸ್.ರಜನಿ
ಫೋಟೋಗ್ರಾಫಿ : ವಸಿಷ್ಠ
ಕೀಯಿಂಗ್ : ಜಗನ್ನಾಥ

No comments: