Thursday, June 18, 2015

ಕಲ್ಲಹಳ್ಳಿ ಭೂವರಾಹ ಸ್ವಾಮಿ ದೇವಾಲಯ (Kallahalli Bhoovaraaha Swami Temple)

ಕಲ್ಲಹಳ್ಳಿ ಭೂವರಾಹ ಸ್ವಾಮಿ ದೇವಾಲಯ



ಹೊಸಹೊಳಲಿನ ಐತಿಹಾಸಿಕ ದೇವಾಲಯದ ದರ್ಶನವಾದ ಬಳಿಕ ಸಮೀಪದಲ್ಲೇ ಇರುವ ಕಲ್ಲಹಳ್ಳಿಗೆ ನಮ್ಮ ಪಯಣ ಸಾಗಿತು, ಅಲ್ಲಿ ಈಚೆಗೆ ಬಹಳವಾಗಿ ಕೇಳಿಬರುತ್ತಿರುವ ಭೂವರಾಹ ಸ್ವಾಮಿಯ ದರ್ಶನ ಪಡೆಯುವ ಸಲುವಾಗಿ. ದೇವಾಲಯ ಇನ್ನೂ ಜೀರ್ಣೋದ್ಧಾರದ ಹಂತದಲ್ಲಿದೆ. ಕೆಲವು ವರ್ಷಗಳ ಹಿಂದೆ ದುಬಾಯಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉದ್ಯಮಿಯೊಬ್ಬರಿಗೆ ಕನಸಿನಲ್ಲಿ ಬಂದ ಈ ಮೂರ್ತಿ ನನಗೆ ಪೂಜಾದಿಗಳು ಇಲ್ಲದೆ ಪಾಳು ಬಿದ್ದಿರುವೆ ಎಂಬ ಕನಸು ಪದೇ ಪದೆ ಬೀಳುತ್ತಿತ್ತಂತೆ. ಕುತೂಹಲದಿಂದ ಅವರು ಬಂದು ಈ ಸ್ಥಳವನ್ನು ಹುಡುಕಿ ನೋಡಲಾಗಿ ಆಆಳೆತ್ತರದ ಈ ಭವ್ಯವಾದ ಸಾಲಗ್ರಾಮ ಶಿಲೆಯ ಮೂರ್ತಿ ಕಾಣಿಸಿತಂತೆ. ಆಗ ಅವರೇ ಮುಂದಾಗಿ ಎಲ್ಲ ಆರ್ಥಿಕ ವ್ಯವಸ್ಥೆಯನ್ನು ವಹಿಸಿಕೊಂಡು ಮೈಸೂರಿನ ಪರಕಾಲಮಠದ ಪೂಜ್ಯ ಸ್ಮಾಮೀಜಯವರ ಆಶೀರ್ವಾದದೊಂದಿಗೆ ಜೀರ್ಣೋದ್ಧರ ಕಾರ್ಯ ಪ್ರಾರಂಭಿಸಿದರಂತೆ. ಹಾಗಾಗಿ ಈಗ ಪರಕಾಲಮಠದ ಶ್ರೀ ಶ್ರೀ ಶ್ರೀ ವಾಗೀಶಬ್ರಹ್ಮತಂತ್ರ ಮಹಾಸ್ವಾಮಿಗಳವರ ನೇತೃತ್ವದಲ್ಲೇ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದೆ. ವರಾಹಸ್ವಾಮಿಯು ತಮ್ಮ ಎಡಬಗಲಲ್ಲಿ ಭೂದೇವೀ ಮಾತೆಯನ್ನು ಹಿಡಿದು ಕುಳಿತಿರುವ ಭಂಗಿಯಂತೂ ಕಣ್ಮನಗಳಿಗೆ ವರ್ಣಿಸಲಾಧ್ಯ. ಅದನ್ನು ದರ್ಶಿಸಿಯೇ ಅನುಭವಿಸಬೇಕು. ಮೂರ್ತಿ ಹೊಯ್ಸಳರ ಕಾಲದ್ದೆಂಬ ಮಾಹಿತಿ ಇದೆ.

ದೇವಾಲಯ ಜೀರ್ಣೋದ್ಧಾರದ ಹಂತದಲ್ಲಿದ್ದರೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ದೂರ ದೂರದಿಂದ ಬರುತ್ತಾರೆ.  ಶನಿವಾರ ಭಾನುವಾರದಲ್ಲಂತೂ ಇನ್ನೂ ವಿಶೇಷ. 



ಲ್ಲಿನ ಮತ್ತೊಂದು ವಿಶೆಷವೆಂದರೆ.ಹೊಸದಾಗಿ ಮನೆ ಕಟ್ಟುವವರು ಜಾತಿ ಮತಗಳ ಭೇದವಿಲ್ಲದೆ ಇಲ್ಲಿಗೆ ಬಂದು ಇಟ್ಟಿಗೆಗಳನ್ನು ಪೂಜೆ ಮಾಡಿಸಿ ಕೊಂಡೊಯ್ಯುತ್ತಾರೆ. ಹಾಗೆ ಮಾಡಿ ಆ ಇಟ್ಟಿಗೆಗಳಿಂದ ಮನೆ ಮೊದಲಾದುವುಗಳ ನಿರ್ಮಾಣ ಪ್ರಾರಂಭಿಸಿದರೆ ಎಲ್ಲವೂ ನಿರ್ವಿಘ್ನವಾಗಿ ಸುಸೂತ್ರವಾಗಿ ಪೂರ್ಣಗೊಂಡು ಕುಟುಂಬಕ್ಕೆ ಸುಖ ಶಾಂತಿ ದೊರೆಯುವುದೆಂಬ ನಂಬಿಕೆ ಎಲ್ಲರಲ್ಲೂ ದಟ್ಟವಾಗಿರುವ ಹಾಗೆ ಕಂಡುಬರುತ್ತಿದೆ.





ದೇವಾಲಯದ ಬದಿಯಲ್ಲೇ ಕಾವೇರಿ ವೈಯ್ಯಾರದಿಂದ ನಡೆದು ಸಾಗುತ್ತಿದ್ದಾಳೆ. ಸುತ್ತ ಮುತ್ತ ಹಸಿರು ಮನಸ್ಸಿಗೆ ಮುದ ತುಂಬಿಕೊಡುತ್ತದೆ. ದೇವಾಲಯದ ಮುಂದೆ ಎರಡು ಬದಿಗಳಲ್ಲಿ ಅಲ್ಲಿನ ರೈತರು ತಾವು ಬೆಳೆದ ಸೊಪ್ಪು ತರಕಾರಿಗಳನ್ನು ಆಗ ತಾನೇ ಕಿತ್ತು ತಂದು ಮಾರುತ್ತಿರುತ್ತಾರೆ. ಅಲ್ಲಿಗೆ ಬಂದ ಯಾರೊಬ್ಬರೂ ಅಪರೂಪಕ್ಕೆ ಸುಲಭ ಬೆಲೆಗೆ ಸಿಗುವ ಆ ಶುದ್ಧ ತರಕಾರಿಗಳನ್ನು ಕೊಳ್ಳದೆ ಹೊರಡುವುದಿಲ್ಲ. ನಾವೂ ಅದೇ ಕೆಲಸ್ ಮಾಡಿ ಅಲ್ಲಿಂದ ಮುಂದೆ ಕೆರೆ ತೊಣ್ಣುರಿನ ಕಡೆ ಪಯಣ ಬೇಳೆಸಿದೆವು.


ಲೇಖಕರು : ಎನ್.ಎಸ್.ರಜನಿ 
ಫೋಟೋಗ್ರಾಫಿ : ವಸಿಷ್ಠ
ಕೀಯಿಂಗ್ : ಜಗನ್ನಾಥ

No comments: