ಬೇತಮಂಗಲದ ವಿಜಯೇಂದ್ರ
ಅಕ್ಟೋಬರ್ ಮಾಸದ ಕಡೆಯವಾರದಲ್ಲಿ ಒಂದು ಶನಿವಾರ ನಮ್ಮ ಕುಟುಂಬ ಕೋಲಾರದಲ್ಲಿರುವ ಅನೇಕ ಸ್ಥಳಗಳನ್ನು ನೋಡಿ ಆನಂದಿಸುವ ಸಲುವಾಗಿ ಪ್ರಯಾಣ ಬೆಳೆಸಿದೆವು. ಮುಂಜಾನೆ ೫ಗಂಟೆಗೆ ಸರಿಯಾಗಿ ಮನೆ ಬಿಟ್ಟು ನಾವು ಅನೇಕ ಸ್ಥಳಗಳನ್ನು ವಿಶೇಷಗಳನ್ನು ದರ್ಶಿಸಿ ಆನಂದಿಸಿ ಮನೆಗೆ ಹಿಂತಿರುಗಿದಾಗ ರಾತ್ರಿ ೧೦ಗಂಟೆ ಆಗಿತ್ತು. ಆದರೂ ಕೆಲವು ಸ್ಥಳಗಳನ್ನು ನೋಡಲು ಆಗಲೆ ಇಲ್ಲ. ಆ ದಿನ ನೋಡಿದ ಸ್ಥಳಗಳು, ದೇಗುಲಗಳು ಬಹಳ ಸುಂದರವೂ ಮನಮೋಹಕವೂ ಆಗಿದ್ದವು. ಅಂದು ನಮ್ಮನ್ನು ಒಂದು ಸ್ಥಳ ಬಹಳವೇ ಆಕರ್ಷಿಸಿತು. ಅದೇ ಬೇತಮಂಗಲ ಎಂಬ ಊರಿನ ವಿಜಯೇಂದ್ರ ದೇವಸ್ಥಾನ.
ದೇವಸ್ಥಾನವು ಹೊರಗೆ ಕಾಣಲು ಸರಳ ಸುಂದರ, ಒಳಗೆ ಭವ್ಯಭಂದುರ.
ಈ ದೇವಳವನ್ನು ಗಂಗರಸರಕಾಲದಲ್ಲಿನ ಅರಸರು ಕಟ್ಟಿದ್ದಾರೆ ಎನ್ನುತ್ತಾರೆ. ಮುಂದೆ ವಿಜಯರಸರ ಕಾಲದಲ್ಲಿ ಊರ್ಜಿತಗೊಂಡಿದೆ. ಇಂದಿಗೂ ಶ್ರೀವೈಷ್ಣವ ಪದ್ದತಿಯಲ್ಲಿ ಪೂಜಕೈಂಕರ್ಯಗಳು ನಡೆಯುತ್ತಿವೆ.
ಮುಂಭಾಗದಲ್ಲಿ ಗರುಡಗಂಬವಿದೆ ಹಾಗು ಪುಟ್ಟ ಗುಡಿಯಿದೆ. ಅಕ್ಕಪಕ್ಕದಲ್ಲಿ ಅಂಗಳಗಳಿವೆ. ಒಳಗೆ ತಿರುಗಿದ ಕೂಡಲೆ ಸುಂದರ ವಿಷ್ಣುಮೂರ್ತಿಯು ಎಲ್ಲರ ಗಮನವನ್ನು ಸೆಳೆಯುತ್ತದೆ. ಸೊಗಸಾದ ಪುಷ್ಪಾಲಂಕಾರ ಮಾಡಿ ಅರ್ಚಕರು ಪಾಂಗಿತವಾಗಿ ಪೂಜೆಮಾಡುವಾಗ ಎಲ್ಲರ ಮನದಲ್ಲೂ ಭಕ್ತಿಭಾವದ ಅಲೆಗಳು ತುಂಬಿಕೊಳ್ಳುತ್ತದೆ.
ಇಲ್ಲಿನ ವಿಶೇಷತೆಯೆಂದರೆ ವಿಷ್ಣುವಿನ ಭವ್ಯ ಶ್ರೀಮೂರ್ತಿಯು ಕುಳಿತಿರುವ ಭಂಗಿಯಲ್ಲಿದೆ. ಸ್ವಾಮಿ ಸಾಲಿಗ್ರಾಮದ ಶಿಲೆಯಿಂದ ಕೂಡಿ ತೇಜೋಮಯವಾಗಿದ್ದಾನೆ.ವರದಹಸ್ತನಾಗಿದ್ದಾನೆ. ಬಲಗಾಲನ್ನು ಮಡಚಿಕೊಂಡು ಎಡಗಾಲನ್ನು ಕೆಳಗೆ ಇಳಿಬಿಟ್ಟಿದ್ದಾನೆ. ಅಕ್ಕ ಪಕ್ಕದಲ್ಲಿ ಶ್ರೀ ಭೂ ದೇವಿಯರು ನಿಂತಿರುತ್ತಾರೆ ಹಾಗು ಸ್ವಾಮಿಯು ಶಂಖ ಚಕ್ರಧಾರಿಯಾಗಿದ್ದಾನೆ. ಎಷ್ಟು ನೋಡಿದರೂ ಮತ್ತಷ್ಟು ನೋಡಬೇಕೆನಿಸುವ ಆಕರ್ಷಣೆಯಿಂದ ಕೂಡಿರುವ ಸ್ವಾಮಿಯ ವಿಗ್ರಹಗಳು ಚಿತ್ತಾಪಹಾರಿಯಾಗಿರುವುದು ನಿಜ.
ಬಲಪಾರ್ಶ್ವದಲ್ಲಿ ಇನ್ನೋಂದು ಸ್ವಾಮಿಯ ವಿಗ್ರಹವು ಸುಂದರವಾಗಿದೆ. ಐದು ಹೆಡೆಯ ಶೇಷಾಸನ ರೂಢನಾಗಿರುವ ಸಾಲಿಗ್ರಾಮ ಶಿಲೆಯ ಶ್ರೀರಂಗನಾಥನ ಭವ್ಯ ಮೂರ್ತಿಯಿದೆ. ಪಾದತಳದಲ್ಲಿ ಶ್ರೀ ಭೂ ದೇವಿಯರ ಸುಂದರ ಮೂರ್ತಿಗಳಿವೆ. ಸುಂದರವಾಗಿ ಅಲಂಕರಿಸಲ್ಪಟ್ಟ ಮೂರ್ತಿಗಳಿಗೆ ಸಾಂಪ್ರದಾಯಿಕವಾಗಿ ಪಾಂಗಿತವಾಗಿ ಪೂಜೆ ನಡೆಯುವುದನ್ನು ನೋಡುವುದೇ ಒಂದು ಆನಂದ. ಶಾಂತ ಪ್ರಶಾಂತ ವಾತಾವರಣದಲ್ಲಿ ಭಗವಂತನ ಸಾನಿಧ್ಯದಲ್ಲಿ ಆ ಹೊತ್ತಿನಲ್ಲಿ ನಮ್ಮೆಲ್ಲರ ಮನವು ಭಕ್ತಿಯ ಅನುಭೂತಿಯಲ್ಲಿ ತುಂಬಿಹೋಗಿದ್ದಂತು ಸತ್ಯ !!
No comments:
Post a Comment