Tuesday, February 7, 2012

Mantralaya - ondu pakshi noota

ಲೇಕಖಿ :          ರಜನಿ.ಏನ್.ಎಸ್ 
ಫೋಟೋಗ್ರಫಿ :  ವಸಿಷ್ಠ


ನೂತನ ಮಂತ್ರಾಲಯದಲ್ಲಿ ವಿನೂತನ ಅನುಭವ.


Pencil Sketch by Sindhu Srikanth


ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾ ಚ.
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ.


೨೦೦೪ ರಲ್ಲಿ ನಾವು ನಮ್ಮವರು ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಹೋಗಿದ್ದೆವು. ಅದಾದ ಮೇಲೆ ಈಗಲೇ ನಾವು ಹೋಗಿದ್ದು.


ಮೂರು ದಿನ ತುಂಗೆಯ ಪ್ರವಾಹದಲ್ಲಿ ಮುಳಿಗೆದ್ದ ಹಳೆಯ ಪುಣ್ಯಕ್ಷೇತ್ರ ಈಗ ನೋಡಿದಾಗ ನನಗೆ ನಂಬಲೇ ಆಗಲಿಲ್ಲ, ಸಂಪೂರ್ಣ ಬದಲಾಗಿತ್ತು. ನವ ವಧುವಿನಂತೆ ಶೃಂಗಾರಗೊಂಡ ಹೊಸ ಹೊಸ ಸುವ್ಯವಸ್ಥಿತ ಕಟ್ಟಡಗಳಿಂದ ಶೋಭಿತವಾಗಿರುವ ಈಗಿನ ಮಂತ್ರಾಲಯ ಕ್ಷೇತ್ರವು ಭವ್ಯವಾಗಿ ರಾರಾಜಿಸುತ್ತಿತ್ತು. ಆದರೆ ಬಾಹ್ಯದ ಅಲಂಕಾರ ವೈಭೋಗ ಏನೇ ಇದ್ದರೂ ಒಳಗೆ ನಡೆದಾಗ, ದಿವ್ಯವಾದ ರಾಯರ ಮೂಲ ಬೃಂದಾವನ ಪಕ್ಕದಲ್ಲಿ ವಾದಿರಾಜ ತೀರ್ಥರ ಬೃಂದಾವನ, ಎದುರಿಗೆ ಮುಖ್ಯ ಪ್ರಾಣನ ಮೂರ್ತಿ ಎಲ್ಲವೂ ನೇರ ಅಂತರಂಗದ ಆಳಕ್ಕೆ ಸೆಳೆದೊಯ್ಯುವ ದಿವ್ಯ ಶಕ್ತಿಯಾಗಿತ್ತು ಅನ್ನುವುದು ನಿಜ. 


ಈಗಿನ ವ್ಯವಸ್ಥೆಯನ್ನು ಬಹಳವಾಗಿ ಮೆಚ್ಚಬೇಕಾಗುತ್ತದೆ. ಪ್ರವೇಶ ಮಾಡುತ್ತಿದ್ದ ಹಾಗೆ ವಿಶಾಲವಾದ ಪ್ರಾಂಗಣವಿದೆ. ಒಳಗಡೆ ಮಂಚಾಲಮ್ಮನ ದೇವಾಲವನ್ನು ಅತ್ಯಂತ ಸುಂದರವಾಗಿ ಕಟ್ಟಿದ್ದಾರೆ. ಪ್ರಾಂಗಣದ ಒಂದು ಗೂಡಿನಲ್ಲಿ ಚಿನ್ನದ ರಥವಿದೆ. ಧರ್ಮ ದರ್ಶನದಲ್ಲಿ ರಾಯರ ದರ್ಶನ ಮಾಡಿ ಊಟದ ಟಿಕೇಟ್ ಪಡೆದು ಶುಚಿ ರುಚಿಯಾದ ಪ್ರಸಾದ ಊಟವನ್ನು ಮಾಡಬಹುದು. ಇನ್ನೊಂದು ಕಡೆ ಪರಿಮಳ ಪ್ರಸಾದ ಪಡೆಯುವ ಕೌಂಟರ್ ಇದೆ. ಕ್ಯೂನಲ್ಲಿನಿಂತು ಅದನ್ನು ಪಡೆಯಬಹುದು, ಎಷ್ಟು ಬೇಕಾದರೂ ಕೊಂಡು ಒಯ್ಯಬಹುದು. 


ಮೊದಲು ಮಂಚಾಲಮ್ಮನನ್ನು ದರ್ಶಿಸಿ ನಂತರ ರಾಯರ ದರ್ಶನ ಪಡೆಯಬೇಕು. 
ಮಂತ್ರಾಲಯದಿಂದ ಅದಕ್ಕೆ ಸಂಬಂಧಪಟ್ಟಂತೆ ನಾವು ನೋಡಬೇಕಾದ ಕ್ಷೇತ್ರಗಳೆಂದರೆ ನವ ಬೃಂದಾವನ (ಬಿ ಚ್ಚಾಲೆ ಎಂಬ ಊರು), ನಂತರ ಪಂಚಮುಖಿ ಆಂಜನೇಯ.

ಎಲೆ ಬಿಚ್ಚಾಲೆ ಎಂಬ ಊರು ಮಂತ್ರಾಲಯಕ್ಕೆ ಕೇವಲ ಅರ್ಧ ಗಂಟೆಯ ಹಾದಿ ಅಷ್ಟೆ. ಅಲ್ಲಿಗೆ ಗುರುರಾಯರು ಸನ್ಯಾಸತ್ವ ತೆಗೆದುಕೊಂಡರ ಹೊಸದರಲ್ಲೇ ಬಂದಿಳಿದಿದ್ದರಂತೆ. ಅಲ್ಲಿ ತಣ್ಣಗೆ ಸ್ವಲ್ಪ ರಭಸವಾಗಿ ತುಂಗೆಯು ಹರಿಯುತ್ತಿದ್ದಾಳೆ.
River Tunga

ದಡದ ಮೇಲೆ ಒಂದು ದೊಡ್ಡ ಅಶ್ವಥ ಕಟ್ಟೆ ಇದೆ. ಅದರ ಮುಂದೆ ಆಂನೇಯನ ಸುಂದರ ಮೂರ್ತಿ ಇದೆ. ಎದುರಿಗೆ ಒಂದು ಸುಂದರ ಬೃಂದಾವನ ಹಾಗೂ ಅದರಲ್ಲಿ ಉಗ್ರ ನರಸಿಂಹನ ಮೂರ್ತಿ ಕೆತ್ತಲ್ಪಟ್ಟಿದೆ. ಆ ಕಟ್ಟೆಯ ಮೇಲೆ ಕುಳಿತ ರಾಯರು ಮೌನವಾಗಿ ಜಪ ನಿರತರಾಗುತ್ತಿದ್ದರಂತೆ. ಅವರಿಗೆ ಜಪದ ಕಟ್ಟೆ ರಾಯರು ಎಂದು ಅಲ್ಲಿನ ಜನ ಕರೆಯುತ್ತಿದ್ದರು. 
Japada Katte, Nava Brindavana


ಅಲ್ಲ್ಯೇ ಹತ್ತಿರದಲ್ಲಿ ಅಪ್ಪಣ್ಣಾಚಾರ್ಯರ ಮನೆ ಇದ್ದು ಆ ವಂಶಜರು ಈಗಲೂ ಆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ರಾಯರನ್ನು ನೋಡಿದಾಗ ಅವರಿಗೆ ದಿವ್ಯ ತೇಜಸ್ಸಿನಿಂದ ಬೆಳಗುತ್ತಿದ್ದ ರಾಯರನ್ನು ನೋಡಿ ಇವರು ಸಾಮಾನ್ಯ ಸಂತರಲ್ಲ. ದೈವಾಂಶ ಮಹಿಮರು ಎಂದು ಅನಿಸಿತಂತೆ. ರಾಯರ ಸೇವೆಯನ್ನು ಮಾಡುತ್ತಾ ಅವ್ಚರಿಗೆ ಪರಮಾಪ್ತ ಶಿಷ್ಯರಾದರು.


ಬಹಳ ಪ್ರಶಾಂತವಾದ ವಾತಾವರಣದಲ್ಲಿರುವ ಆ ಕ್ಷೇತ್ರವು ರಾಯರ ದಿವ್ಯ ಮಹಿಮೆಯ ಕಥೆಯನ್ನು ಲೋಕಕ್ಕೆ ಸಾರುತ್ತಿದೆಯೇನೋ ಎಂದೆನಿಸುತ್ತದೆ. 
ಅಲ್ಲಿಂದ ಅನತಿದೂರದಲ್ಲಿ ಪಂಚಮುಖಿ ಆಂಜನೇಯನ ಸ್ಥಳವಿದೆ. ದೊಡ್ಡ ದೊಡ್ಡ ಕಲ್ಲು ಬಂಡೆಗಳ ಒಳಗೆ ವಿಶಾಲವಾದ ಗುಹೆ ಇದೆ. ರಾಯರು ಅಲ್ಲಿಯೇ ೧೨ ವರ್ಷ ತಪಸ್ಸು ಮಾಡಿದಾಗ ಪಂಚಮುಖಿ ಆಂಜನೇಯನು ಉದ್ಭವವಾಗಿ ದರ್ಶನ ನೀಡಿದನು. ಅಲ್ಲಿಯೇ ಅವರಿಗೆ ಕೊಲ್ಲಾಪುರದ ಮಹಾಲಕ್ಷ್ಮಿ ಹಾಗೂ ತಿರುಪತಿಯ ವೇಂಕಟೇಶನ ದರುಶನವೂ ಆಯಿತು ಮುಂದೆ ಮಂಚಾಲೆಗೆ ಹೂಗಿ ನೆಲಸುವ ಪ್ರೇರಣೆಯೂ ಆಯಿತು.  ಅಲ್ಲಿಯೂ ಸಹ ಸ್ನಿಗ್ಧ ಸೌಂದ್ದರ್ಯವಿದೆ. ಅಲ್ಲಿಯೇ ಸ್ವಲ್ಪ ದೂರದಲ್ಲಿ ಎರ್ಕುಲಮ್ಮ ಎಂಬ ಗ್ರಾಮ ದೇವತೆಯ ಗುಡಿ ಇದೆ. ಸುತ್ತಲೂ ಕಲ್ಲು ಬಂಡೆಗಳ ಪ್ರಪಂಚವೇ ತುಂಬಿದೆ. 
Our Family, on the steps of Panchamukhi Anjaneya

Helicopter Rock



ಹೀಗೆ ಎಲ್ಲವನ್ನೂ ನೋಡಿಕೊಂಡು ಬರುವಾಗ ಹಾದಿಯ ಎರಡು ಕಡೆಗಳಲ್ಲೂ ಹಚ್ಚ ಹಸುರಿನ ಗಿಡಗಳ ಹೊಲಗಳನ್ನು ನೋಡಿದೆವು. ಆ ಗಿಡಗಳಲ್ಲಿ ಗೊಂಚಲು ಗೊಂಚಲುಗಳಾಗಿ ತೂಗುತ್ತಿದ್ದ ಅಚ್ಛ ಕೆಂಪು ಮೆಣಸಿನ ಹಣ್ಣುಗಳನ್ನು ನೋಡಿ ಆನಂದಿಸಿದೆವು. 


ಪ್ರಯಾಣ ಹಿತಕರವಾಗಿತ್ತು. ಗುರುರಾಯರ ದರ್ಶನಭಾಗ್ಯ ಪಡೆದ ನಮ್ಮ ಮನದಲ್ಲಿ ಒಂದು ವಿನೂತನ ಧನ್ಯತಾ ಭಾವವು ನೆಲೆಗೊಂಡಿತ್ತು.

1 comment:

V.K.Kulkarni said...

Hare Shreenivasa,

Information is fine & Useful. One small correction- It is 108 Shree Vadieendra Teerthara Moola Vrandavan that is situated adjecent to 108 Shree Raghavendrara Teerthara Vrandavana.

108 Shree Vadirajar Vrandavana is at Sonda Near Sirsi in Karwar District.