Monday, September 14, 2009

ಒಂದು ಸಂಜೆಯ ಸವಿ

ಒಂದು ಸಂಜೆಯ ಸವಿ

ಅಂದು ಸಂಜೆ ನನ್ನ ಮಗ ಆಫೀಸಿನಿಂದ ಬಂದಾಗ ಬಹಳ ಉತ್ಸಾಹದಲ್ಲಿದ್ದಂತೆ ಕಂಡ. ಏನೋ! ಈವತ್ತು ಇಷ್ಟೊಂದು ಖುಷಿ ಕಾಣಿಸ್ತಿದೆ ನಿನ್ನ ಮುಖದಲ್ಲೀಂದೆ. ಅಮ್ಮಾ, ನಾಳೆಯಿಂದ ನಾಲ್ಕು ದಿನ 'ರಜಾದ ಮಜಾ' ಅಂದ. ಓಹೋ! ಇದಾ ನಿನ್ನ ಉತ್ಸಾಹಕ್ಕೆ ಕಾರಣ ಎಂದಾಗ ಅದಕ್ಕವನು, ನಿನಗೆ 'All The Best' ಅಂದ. ನನಗೆ ಅಚ್ಚರಿ - ನಾನೇನು ಪರೀಕ್ಷೆಗೆ ಕಟಿದ್ದೀನಾ? ಅಂದೆ, ಅರ್ಥವಗದೆ.

ಅಯ್ಯೋ ಅಮ್ಮ 'All The Best' ನಾಟಕ ಪ್ರದರ್ಶನವಾಗ್ತಾ ಇದೆ ರವೀಂದ್ರ ಕಲಾಷೇತ್ರದಲ್ಲಿ. ಅದಕ್ಕೆ ನಿನ್ನನ್ನು ಕರೆಸುಕೊಂಡುಹೋಗೋಣಾಂತ ಅಂದಾಗ ನನಗೆ ನಿಜವಾಗಲೂ ಬಹಳ ಸಂತಸವಾಯಿತು. ನಾಟಕ ನೋಡಿ ಬಹಳ ದಿನ ಆಗಿದೆ, ನಡಿ ಈವತ್ತೇ ಸಂಜೆ ಹೋಗೋಣಾಂದೆ. ನನಗೆ ಕಲಾಕ್ಷೇತ್ರವನ್ನೂ ನೋಡುವ ಹಂಬಲವೂ ಇತ್ತೂ ಅನ್ನಿ. ಸಂಜೆ ೬ ರ ಪ್ರಸರ್ಶನಕ್ಕೆ ನಾನು ಮಗ ಮಗಳು ಮೊಮ್ಮಗಳು ಎಲ್ಲರೂ ಹೋದೆವು. ಪ್ರವೇಶ ಉಚಿತ. ಅದೂ ಒಂದು ಸಂತಸದ ವಿಷಯ. ನಮ್ಮ ನಮ್ಮ ಸ್ಥಳಗಳಿಂದ ರವೀಂದ್ರಕಲಾಕ್ಷೇತ್ರಕ್ಕೆ ಹೋಗಿಬರುವ ಖರ್ಚಷ್ಟೇ. ಕೇಂದ್ರೀಯ ನಾಟಕ ಅಕಾಡಮಿ ಸಂಸ್ಥೆಯವರು ನಾಟಕ ಪ್ರದರ್ಶನವನ್ನು ಉಚಿತವಾಗಿ ಆಯೋಜಿಸಿದ್ದರು.
ಢಾರಾವಾಹಿ, ಸಿನಿಮಾ ಗಳಲ್ಲಿ ನಟಿಸುವ ಕಲಾವಿದ್ ಬಿ.ವಿ.ರಾಜಾರಂ ರವರು ಅಲ್ಲಿನ ವ್ಯವಸ್ಥೆಯ ರೂವಾರಿಯಾಗಿದ್ದರು. ಅಚ್ಚುಕಟ್ಟಾಗಿ ಮಾಡಿದ್ದರು.

ಮೂಲ ಮರಾಠಿ ನಾಟಕವನ್ನು ಕನ್ನಡೀಕರಿಸಿ ಷ್ರೀ ಯಶವಂತ ದೇಶಪಾಂಡೆ ನಿರ್ದೇಶನ ಮಾಡಿದ್ದರು. ಅವರ ನಿರ್ದೇಶನದಲ್ಲಿ ನಾಟಕ ೬೦೦ ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ ಎನ್ನುವುದೇ ಹೆಮ್ಮೆಯ ವಿಚಾರ.

ಒಬ್ಬ ಕಿವುಡ, ಒಬ್ಬ ಕುರುಡ ಹಾಗೂ ಒಬ್ಬ ಮೂಕ ಒಂದೇ ಸೂರಿನಡಿಯಲ್ಲಿ ವಾಸಿಸುತ್ತಿರುತ್ತಾರೆ. ಮೂವರೂ ಬಹಳ ಬುದ್ಧಿವಂತರು, ಪ್ರತಿಭಾವಂತರು. ಆದರೆ ಅವರ ಅಂಗವಿಕಲತೆಯನ್ನು ನಿನೆಯುತ್ತಾ ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಅಕಸ್ಮಾತ್ತಾಗಿ ಕುರುಡನಿಗೆ ಒಬ್ಬಳು ಆದರ್ಶ ಹುಡುಗಿಯ ಭೇಟಿಯಾಗುತ್ತದೆ.ಅವಳಾದರೊ ಮೂವರನ್ನೂ ಭ್ಟಿಯಾಗಲು ಮನೆಗೆ ಬರುತ್ತಾಳೆ. ಅವರಲ್ಲಿನ ನಿಜ ಪ್ರತಿಭೆಯನ್ನು ಗುರುತಿಸಿ, ಅವರಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಜೀವನದಲ್ಲಿ ಮುಂದೆ ಬರಲು ಪ್ರೋತ್ಸಾಹಿಸುತ್ತಾಳೆ. ಮೂವರೂ ಮನದೊಳಗೆ ಅವಳು ತನ್ನನ್ನೇ ಪ್ರೀತಿಸುತ್ತಾಳೆ ಎಂದು ಕಲ್ಪಿಸಿಕೊಂಡು ಅವಳು ಬಂದಾಗ ವಿಪರೀತ ಸಂಭ್ರಮ ತೋರಿಸುತ್ತಾರೆ. ತಮ್ಮ ತಮ್ಮ ಅಂಗದೋಷವನ್ನು ಮುಚ್ಚಿರಿಸಿ ಅವಳ ಒಲವನ್ನು ಗಳಿಸುವ ಯತ್ನದಲ್ಲಿ ಅವರು ಮಾಡುವ ಅಂಗಚೇಷ್ಟೆ, ನಡೆ ನುಡಿಗಳು ಅದೆಷ್ಟು ಹಾಸ್ಯಮಯವಾಗಿತ್ತೂಂದ್ರೆ ನಕ್ಕು ನಕ್ಕು ನಮಗೆ ಹೊಟ್ಟೆ ಹಿಡಿದುಕೊಂಡುಬಿಡುತ್ತದೆ. ಇಡೀ ರಂಗಮಂದಿರ ನಗೆಗಡಲಲ್ಲಿ ಮುಳುಗಿತ್ತು. ಉತ್ತರ ಕನ್ನಡ ಭಾಷಾ ವೈಖರಿಯೇ ಆ ನಾಟಕದ ಜೀವಾಳ ಎನಿಸಿತು. ಆ ಭಾಷೆಯಾ ಸೊಗಡು, ಕಲಾವಿಧರ ಅಂಗವಿನ್ಯಾಸಕ್ಕೆ ಸರಿಯಾಗಿ ಹೊಂದುತ್ತಿದ್ದಾದ್ದರಿಂದ ನಾಟಕ ಬಹಳವಾಗಿ ವಿಜೃಂಭಿಸಲು ಸಹಕಾರಿಯಾಗಿತ್ತು.

ನಾಟಕದ ಅಂತ್ಯಭಾಗದಲ್ಲಿ ಆ ಮೂವರೂ ಅಂಗವಿಕಲರು ನಾಯಕಿಯ ಬಳಿ ತಮ್ಮ ತಮ್ಮ ಒಲವನ್ನು ಅರುಹುತ್ತಾರೆ. ಆಗ ನಾಯಕಿ ಅವರನ್ನು ನಿರಾಸೆಗೊಳಿಸುವುದಕ್ಕೆ ಕ್ಷಮೆ ಕೇಳಿ ತಾನು ಎರಡೂ ಕಾಲಿಲ್ಲದ ಹುಡುಗನನ್ನು ಮದುವೆಯಾಗುತ್ತಿರುವುದಾಗಿ ತಿಳಿಸುತ್ತಾಳೆ. ಅವರನ್ನು ಮಿತ್ರರೆಂದು ಭಾವಿಸಿ ಅವರ ಪ್ರತಿಭೆ ಗುರುತಿಸಿ ಸಮಾಜದಲ್ಲಿ ಮುಂದೆ ಬರಲು ಪ್ರೋತ್ಸಾಹಿಸುವುದೇ ತನ್ನ ಉದ್ಧೇಶವಾಗಿತ್ತು ಎಂದು ತಿಳಿಸುತ್ತಾಳೆ. ಅಂಗದೋಷವಿದ್ದರೂ ಅದನ್ನೇ ದೊಡ್ಡದಾಗಿಸಿಕೊಂಡು ಕೀಳರಿಮೆಯಿಂದ ಬಳಲುವುದನ್ನು ಬಿಟ್ಟು ಇರುವ ಪ್ರತಿಭೆಯನ್ನು ಕಂಡುಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕೆಂಬುದನ್ನು ಅವರಿಗೆ ಹಾಗೂ ಸಮಾಜಕ್ಕೆ(ನಮಗೆ) ಸಾರುತ್ತಾಳೆ. ಒಂದು ಸಾಮಾಜಿಕ ಸನ್ನಿವೇಶವನ್ನು ಹಾಸ್ಯದ ಔತಣದಲ್ಲೇ ಉಣಬಡಿಸಿದ್ದವರು ಯಶವಂತ ದೇಶಪಾಂಡೆ. ಕುರುಡನ ಪಾತ್ರಧಾರಿ, ಕಿವುಡಾನ ಪಾತ್ರಧಾರಿ (ಸ್ವತಃ ಯಶವಂತ್), ಹಾಗೂ ಮ್ಮೂಕನ ಪಾತ್ರಧಾರಿಗಳು ನಾಟಕದ ಪಾತ್ರಗಳಿಗೆ ಜೀವತುಂಬಿದ್ದರು.
ನಾಯಕಿಯ ಪಾತ್ರದಲ್ಲಿ ಧಾರವಾಹಿ ಸಿನಿಮಾಗಳಲ್ಲಿ ನಟಿಸಿರುವ ಕಲಾವಿಧೆ ಮಾಲತಿ ದೇಶಪಾಂಡೆ ಬಹಳ ಸೊಗಸಾಗಿ ಅಭಿನಯಿಸಿದ್ದರು. ನಾಟಕವನ್ನು ನೋಡಿ ನಿಜಾರ್ಥದಲ್ಲಿ ಆನಂದಿಸಿ ಮನೆಯ ಕಡೆ ಹೆಜ್ಜೆ ಹಾಕಿದಾಗ ಮನಸ್ಸು ಹೂವಿನಂತೆ ಅರಳಿತ್ತು.

ನಿಮ್ಮ ರಜನಿ
(ಬರಹಕ್ಕೆ ವಸಿಷ್ಠ)

No comments: