ಲೇಕಖಿ : ರಜನಿ.ಏನ್.ಎಸ್
ಫೋಟೋಗ್ರಫಿ : ವಸಿಷ್ಠ
ಕೊಲಾರಿನಲ್ಲಿ ಒಂದು ಸುತ್ತು
ರಾತ್ರಿಯ ಕತ್ತಲು ಕರಗುತ್ತಿತ್ತು. ಬೆಳ್ಳ ಬೆಳಕು ಮೂಡುತ್ತಲಿತ್ತು. ನಸುಕಿನ ಹಿತವಾದ ತಂಗಾಳಿ ಕಾರಿನಲ್ಲಿ ಕುಳಿತ ನಮ್ಮೆಲ್ಲರ ಮೈಮನವನ್ನು ಅರಳಿಸುತ್ತಿತ್ತು. ದಾರಿಯನ್ನು ಸೀಳುತ್ತ ನಮ್ಮ ವಾಹನ ಕೋಲಾರದ ಕಡೆ ಸಾಗುತ್ತಿತ್ತು.
ಕಳೆದ ಬಾರಿ ನಾವು ಕೋಲಾರಕ್ಕೆ ಹೋದಾಗ ಅನೇಕ ಸ್ಥಳಗಳನ್ನು ಸಮಯದ ಪರಿಧಿಯಲ್ಲಿ ನೋಡಲಾಗದೆ ಹಿಂತಿರುಗಿದ್ವಿ. ಈಗ ಆ ಎಲ್ಲ ಸ್ಥಳಗಳ ಸೌಂದರ್ಯವನ್ನು ಸಮಿಲು ಹೊರಟಿದ್ವಿ.
ಮೊದಲಿಗೆ ಕೋಲಾರದ ಸುಪ್ರಸಿದ್ಧ ಸ್ಥಳವಾದ ಅಂತರಗಂಗೆಗೆ ಹೊರಟ್ವಿ. ಮುಂಜಾನೆ ೮ ಘಂಟೆಗೆಲ್ಲಾ ನಾವು ಅಲ್ಲಿದ್ವಿ. ಅಂತರಗಂಗೆಯನ್ನು ದಕ್ಷಿಣದ ಕಾಶಿ ಎನ್ನುತ್ತಾರೆ. ಬೆಂಗಳೂರಿನಿಂದ ಸುಮಾರು ೬೫ ಕಿ.ಮೀದೂರದಲ್ಲಿದೆ.
ಸುಮಾರು ನೂರು ಮೆಟ್ಟಲುಗಳನ್ನು ಹತ್ತಬೇಕು. ಅಕ್ಕಪಕ್ಕಗಳಲ್ಲಿ ನೀಲಗಿರಿಯ ಅನೇಕ ಗಿಡಗಳನ್ನು ಬೆಳಸಿದ್ದಾರೆ. ಅದರೆ ನೀಲಗಿರಿಯ ವೃಕ್ಷಗಳನ್ನು ಅಷ್ಟೊಂದುಬೆಳಸಿರುವುದು ಸರಿಯಲ್ಲ ಎಂದು ನಮಗೆ ಅನಿಸಿತು. ಆ ಮರಗಳು ೧೦೦ ಮೈಲಿಗಳಿನಿಂದಲೂ ನೀರನ್ನು ಸೆಳೆದು ಕುಡಿಯುವಿದರಿಂದ ಸುತ್ತಲಿನ ಪ್ರದೇಶಗಳಲ್ಲಿ ನೀರಿನ ಜ್ವಲಂತ ಸಮಸ್ಯೆಯಾಗಬಹುದು. ಅಂತರಗಂಗೆ ಬೆಟ್ಟವನ್ನು ಹಿಂದೆ ಶತಶೃಂಗ ಪರ್ವತ ಎಂದು ಕರೆಯಲಾಗುತ್ತಿತ್ತು. ವಿಪರೀತ ಕೋತಿಗಳಿವೆ. ಆದರೆ ಯಾರಿಗೂ ತೊಂದರೆ ಕೊಡುವುದಿಲ್ಲ. ಏನಾದರೂ ತಿಂಡಿಯನ್ನು ನಿರೀಕ್ಷಿಸುತ್ತವೆ.
ಬೆಟ್ಟದ ಶಿಖರವು ಹಾವಿನ ಆಕಾರದಲ್ಲಿದೆ. ಬಸವನ ಬಾಯಿಂದ ಸಿಹಿಯಾದ ನೀರು ಒಸರುತ್ತದೆ. ಒಳಗೆ ಮೂರು ಗರ್ಭಗುಡಿಗಳಿವೆ. ಗಣಪ ಪಕ್ಕದಲ್ಲೇ ಸುಬ್ರಹ್ಮಣ್ಯರನ್ನು ಕೆತ್ತಿದ್ದಾರೆ. ಮಧ್ಯದಲ್ಲಿ ಕಾಶಿ ವಿಶ್ವನಾಥನ ಲಿಂಗವಿದೆ. ಅದರ ಪಕ್ಕದಲ್ಲಿಇನ್ನೊಂದು ಗರ್ಭಗುಡಿಯಲ್ಲಿ ವಿಶಾಲಾಕ್ಷಿ ನಿಂತು ದರ್ಶನ ನೀಡಿದ್ದಾಳೆ. ಹೊರಪಕ್ಕದಲ್ಲಿ ಸಾಲಾಗಿ ದೊಡ್ಡ ದೊಡ್ಡ ಲಿಂಗಗಳಿವೆ.
ನಾವು ದೇವರನ್ನು ದರ್ಶಿಸಿ ಪ್ರಸಾದ ಸ್ವೀಕರಿಸಿ ಸ್ವಲ್ಪ ಹೊತ್ತು ಕುಳಿತು ಆ ಸ್ಥಳದ್ ಸೌಂದರ್ಯವನ್ನು ಸವಿದು ಮುಂದೆ ಕೋಲಾರಮ್ಮನ ದೇವಸ್ಥಾನದತ್ತ ಸಾಗಿದ್ವಿ. ಕೋಲಾರಮ್ಮನ ದೇವಳವು ಬಹಳ ಪ್ರಾಚೀನವಾದ ದೇವಸ್ಥಾನ. ಸುಮಾರು ೧೮೦೦ ವರ್ಷಗಳ ಇತಿಹಾಸವಿರುವ ದೇವಳ. ರಾಜರಾಜ ಚೋಳನೆಂಬ ಚೋಳರಸ ಕಟ್ಟಿಸಿದ್ದನೆಂದು ಹೇಳುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ದೇವರ ಗುಡಿಯ ಎಡ ಭಾಗದಲ್ಲಿ ಅವನ ಮೂರ್ತಿ ಕೆತ್ತಿದ್ದಾರೆ. ಕೋಲಾರಮ್ಮ ಸ್ಥಳೀಯ ಗ್ರಾಮ ದೇವತೆ ಶಲ್ತಿರೂಪಿಣಿ. ಅವಳನ್ನು ನೇರವಾಗಿ ನೋಡಬಾರದೆಂದು ಮೊದಲು ಕನ್ನಡಿಯಲ್ಲಿ ಆ ತಾಯಿಯನ್ನು ವೀಕ್ಷಿಸಿ ತದನಂತ ಆ ತಾಯಿಯ ಸ್ವಲ್ಪ ಉಗ್ರವೇ ಎನ್ನಬಹುದಾದ ಮೂರ್ತಿಯನ್ನು ವೀಕ್ಷಿಸಬಹುದು.
ದೇವಳದ ಮುಂಬಾಗದಲ್ಲೇ ಏತ್ತರವಾದ ಕೆತ್ತನೆಯಿಂದ ಕೂಡಿದ ಗೋಡೆಗಳು ಬಾಗಿಲುಗಳು ಇವೆ. ದ್ವಾರ ಮಂಟಪಗಳಿವೆ. ಮುಂದೆ ವಿಶಾಲವಾದ ಪ್ರಾಂಗಣವಿದೆ. ಭವ್ಯವಾದ ಮುಖಮಂಟಪವಿದೆ. ದೊಡ್ಡ ದೊಡ್ಡ ಕಂಬಗಳು ದ್ರಾವಿಡ ಹಾಗೂ ಗಂಗರಸರ ಶೈಲಿಯಲ್ಲಿ ಕೆತ್ತಲ್ಪಟ್ಟಿವೆ.
ಗೋಡೆಯಮೇಲೆ ಯುದ್ಧ ಮಾಡುವ ಚಿತ್ರಣವನ್ನು ಸೊಗಸಾಗಿ ಕೆತ್ತಿದ್ದಾರೆ. ಒಳಗೆ ನಡೆದರೆ ಅಲ್ಲೊಂದು ಚಿಕ್ಕ ಪ್ರಾಕಾರ. ಗುಡಿಯ ಒಳಗೆ ನಡೆದು ಒಳಗೆ ಹೋದರೆ ಸಪ್ತ ಮಾತೃಕೆಯರ ಮೂರ್ತಿಗಳನ್ನು ಬಹಳ ದೊಡ್ಡದಾಗಿ ಕೆತ್ತಿರುವುದನ್ನು ನಾವು ನೋಡಬಹುದು.
ಅಲ್ಲಿಂದ ನಾವು ಇನ್ನೊಂದು ಪ್ರಾಚೀನ ದೇವಾಲಯಕ್ಕೆ ಹೋದ್ವಿ. ಅದೇ ಸೋಮೇಶ್ವರನ ದೇವಸ್ಥಾನ. ಈ ದೇವಸ್ಥಾನವು ಚೋಳರಸರ ಕಾಲದಲ್ಲಿ ಕಟ್ಟಲ್ಪಟ್ಟಿದ್ದು ವಿಜಯರಸರ ಕಾಲದಲ್ಲಿಅವರದೇ ಶೈಲಿಯಲ್ಲಿ ಪುನರೋದ್ಧಾರಗೊಂಡಿದೆ. ದೇವಸ್ಥಾನ ಕೋಲಾರದ ಹೃದಯ ಭಾಗದಲ್ಲಿದೆ. ದೇವಸ್ಥಾನದ ಮುಖಧ್ವಾರದ ಎತ್ತರವಾಗಿ ಸುಂದರ ಕೆತ್ತನೆಗಳಿಂದ ಕೂಡಿ ಆಕರ್ಷಣೀಯವಾಗಿದೆ. ದ್ವಾರಗಳ ಅಕ್ಕಪಕ್ಕಗಳಲ್ಲಿ ಮಂಟಪಗಳಿವೆ. ವಸಂತಪಂಟಪವು ಸುಂದರವಾದ ವಿಜಯರಸರ ಶೈಲಿಯಲ್ಲಿ ವಿಸ್ತಾರವಾದ ಕಂಬಗಳಿಂದ ಕೆತ್ತಲ್ಪಟ್ಟಿದೆ. ಗೋಡೆ ಬರಹಗಳಿಂದ ಕೂಡಿದೆ. ಕಲ್ಯಾಣಮಂಟಪವು ಸುಂದರವಾಗಿದೆ. ತುಲಾಭಾರ ಮಂಟಪವಿ ಈ ದೇವಳದಲ್ಲಿದ್ದು ವಿಶಿಷ್ಟವಾಗಿದೆ. ಮುಖ್ಯ ದೇವರು ಸೋಮೇಶ್ವರ ಲಿಂಗದಾಕರದಲ್ಲಿ ಇದೆ. ಹೀಗೆ ಸುಂದರವಾದ ದೇವಸ್ಥಾನವನ್ನು ಮನದಣಿಯ ನೋಡಿ ಹೃನ್ಮನಗಳಲ್ಲಿ ನಲಿವಿನ ಚಿತ್ತಾರ ಬಿಡಿಸಿಕೊಂಡು ನಾವೆಲ್ಲ ಮಾಲೂರಿನತ್ತ ಸಾಗಿದೆವು. ಮಾಲೂರು ಕೋಲಾರದ ಇನ್ನೊಂದು ಸ್ಥಳ ಆ ಊರಿನಲ್ಲಿ ಚಿಕ್ಕ ತಿರುಪತಿಯೆಂದು ಕರೆಯಲ್ಪಡುವ ಪುಣ್ಯದೇಗುಲವಿದೆ.
ದೇಗುಲ ವಿಸ್ತಾರವಾಗಿದೆ. ಸರಳವಾಗಿದೆ. ಭಕ್ತಾದಿಗಳಿಗೆ ಎಲ್ಲ ಸೌಲಭ್ಯಗಳಿವೆ. ವಿಸ್ತಾರವಾದ ಪ್ರಾಕಾರವಿದೆ. ಪೂರ್ವ ಹಾಗೂ ಪಶ್ಚಿಮ ಧ್ವಾರಗಳಿವೆ. ಪೂರ್ವಧ್ವಾರದಲ್ಲಿ ನಡೆದು ಶ್ರೀ ಭೂ ನೀಳಾಸಮೇತನಾಗಿ ನಿಂತಿರುವ ಕಲ್ಯಾಣ ಶ್ರೀನಿವಾಸನ ಕಣ್ಮನ ಸೆಳೆಯುವ ಆಕರ್ಷಕ ಸುಂದರಮೂರ್ತಿಯನ್ನು ನೋಡಿ ಧನ್ಯರಾದೆವು. ಶ್ರೀ ಭೂ ದೇವಿಯರ ನಗೆಮೊಗದ ಸೌಂದರ್ಯ ಚಿತ್ತಾಪಹಾರಿಯಾಗಿದೆ. ಶ್ರೀನಿವಾಸನ ಭವ್ಯತೆಯು ನಯನಮನೋಹರವಾಗಿದೆ. ಸ್ವಾಮಿಯನ್ನು ಮನದಲ್ಲಿ ತುಂಬಿಕೊಂಡು ಪ್ರಸಾದ ಸ್ವೀಕರಿಸಿ ಆಚೆ ಬಂದಾಗ ನಮ್ಮ ಮನಸ್ಸ್ಸು ಆನಂದಪರವಶವಾಗಿತ್ತು. ಆ ಮಂಗಳಕರನ ಸನ್ನಿಧಿಯಲ್ಲಿ ಸ್ವಲ್ಪ ಹೊತ್ತು ಕುಳಿತು ತದನಂತರ ಅಲ್ಲೇ ಅನತಿದೂರದಲೇ (೧೦ ೧೫ ಕಿಮೀ) ಇದ್ದ ಕಲ್ಕುಂಟೆ ಎಂಬ ಪುಣ್ಯಕ್ಷೇತ್ರಕ್ಕೆ ಹೊರಟೆವು. ಅಲ್ಲಿ ಶ್ರೀರಂಗನಾಥ ೫ ಹೆಡೆ ಶೇಷನ ಮೇಲೆ ಮಗ್ಗಲಾಗಿ ಮಲಗಿ ಎಲ್ಲರನ್ನೂ ಕೈಬೀಸಿ ಕರೆಯುತ್ತಿದ್ದಾನೆ ಎಂಬಂತಿದೆ. ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾಗಿರುವ ಮೂರುನಾಮವನ್ನು ಧರಿಸಿ ಯೋಗನಿದ್ರೆಯ ರಮಣೀಯ ಭಂಗಿಯಲ್ಲಿ ಮಲಗಿ ನಸುನಗೆ ಬೀರುತ್ತಿರುವಸ್ವಾಮಿ ಭಕ್ತರನ್ನು ಚುಂಬಕದಂತೆ ಸೆಳೆಯುತ್ತಾನೆ.
ಬಲ ಪಾರ್ಶ್ವದಲ್ಲಿ ಆಂಡಾಳ್ ಬೆಳ್ಳಿ ಒಡವೆಯೊಂದಿಗೆ ಬೆಳ್ಳಿ ಕಮಲದಲ್ಲಿ ನಿಂತು ಬೆಳ್ಳಿ ನಗೆ ಬೀರುತ್ತಿದ್ದರೆ ಎಡ ಪಾರ್ಶ್ವದಲ್ಲಿ ಕೆಂದಾವರೆಯಲ್ಲಿ ನಿಂತು ಕಿರು ನಗೆಯ ಚೆಲ್ವಿನ ಮೋಡಿ ಮಾಡುವಂತೆ ಕಂಗೊಳಿಸುತ್ತಿದ್ದಾಳೆ ಮಹಾಲಕ್ಷ್ಮೀದೇವಿ. ಅಂಗಳದ ಮಂಟಪದ ಮುಂದೆ ಆಳ್ವಾರರುಗಳ ಸಾನಿಧ್ಯವಿದೆ. ಶ್ರೀವೈಷ್ಣವ ಆಚಾರ್ಯರಾದ ಭಗವದ್ರಾಮಾನುಜರ ಭವ್ಯ ಚಿತ್ರವು ಎಲ್ಲರ ಚಿತ್ತಭಿತ್ತಿಗೆ ತಾಗುತ್ತಿದೆ.
ಪ್ರಶಾಂತವಾದ ರಮಣೀಯ ರಂಗನಾಥನ ರ್ಮ್ಯ ಪವಿತ್ರ ಸಾನಿಧ್ಯದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ ತಂದಿದ್ದ ಭೋಜನವನ್ನು ಭುಂಜಿಸಿ ಅಲ್ಲಿಂದ ಏಳುವ ಮನಸಿಲ್ಲದಿದ್ದರೂ ಎದ್ದೆವು. ಇನ್ನೊಂದು ಸ್ಥಳದ ಆಕರ್ಷಣೆಯೂ ನಮ್ಮನ್ನು ಆಗ ಕಾಡುತ್ತಿದ್ದಾದ್ದರಿಂದ. ಆಗ ನಮ್ಮ ಕಾರಿನ ಪಯಣದ ದಿಕ್ಕು ಬದಲಿಸಿತು. ನಾವೀಗ ಕನಕಪುರ ಸಮೀಪದ ಕಲ್ಲಹಳ್ಳಿ ಶ್ರೀನಿವಾಸನನ್ನು ದರ್ಶಿಸಲು ಧಾವಿಸಿದೆವು. ಮಧ್ಯಾಹ್ನದ ಸುಮಾರು ನಾಲ್ಕರ ಸಮಯ. ಸಂಜೆಯ ಇಳಿಸೂರ್ಯನ ಹೊಂಗಿರಣಗಳು ನಿಸರ್ಗದ ಮೇಲೆ ಮೋಡಿಮಾಡಿದ್ದವು. ಪ್ರಕೃತಿಯ ಸಿರಿಸೌಂದರ್ಯದ ರಮ್ಯತೆ ನಮ್ಮೆಲ್ಲರ ಮನವನ್ನು ಮುದಗೊಳಿಸಿತ್ತು.
ಆಗ ಥಟ್ಟನೆ ಒಂದು ಜಾಗಕ್ಕೆ ಬಂದಾಗ ನನ್ನ ಮಗಳು ಮತ್ತು ಸೊಸೆ ಒಳಗೆ ಕಿರುಚಿದರು. ಕಾರಿನ ದಿಕ್ಕು ಬದಲಾಯಿಸಲು. ಕಾರಣವಿಷ್ಟೆ. ಮಾನವ ನಿರ್ಮಿತ ಪಿರಮಿಡ್‌ವ್ಯಾಲೀ ಎಂಬ ಸ್ಥಳವನ್ನು ನೋಡಲೆಂದೇ ಆಗಿತ್ತು. ಈಜಿಪ್ಟಿನ ಪಿರಾಮಿಡ್‌ನ ಆಕಾರದಲ್ಲೇ ಅತಿ ಭವ್ಯವಾದ ಎತ್ತರವಾದ ಧ್ಯಾನಮಂದಿರವನ್ನು ಕಟ್ಟಿದ್ದಾರೆ. ಬ್ರಹ್ಮರ್ಷಿ ಪತ್ರೀಜಿ ಎಂಬ ಮಹನೀಯರೇ ಇದರ ನಿರ್ಮಾತೃ. ಇದೊಂದು ಆಧ್ಯಾತ್ಮಿಕ ಕೇಂದ್ರ. ಸುತ್ತಲಿನ ಸುಂದರವಾದ ನಿಸರ್ಗದ ಪರಿಸರದಿಂದ ಬೆಳಗುತ್ತಿದೆ. ಇಲ್ಲಿಗೆ ನೀವು ಅವಶ್ಯವಾಗಿ ಒಮ್ಮೆ ಭೇಟಿ ನೀಡಿ ಪ್ರಕೃತಿಯ ಸೊಬಗಿನ ಸವಿಯನ್ನೂ ಧ್ಯಾನದ ಮೌನವನ್ನೂ ಅನುಭವಿಸಬಹುದು. ಓದಬಯಸುವವರಿಗೆ ಅಲ್ಲಿ ಗ್ರಂಥಾಲಯದ ಲಭ್ಯವಿದೆ. ತಿನ್ನಲುಣ್ಣಲು ಸೌಲಭ್ಯವಿದೆ. ಬೆಂಗಳೂರಿನ ಯಾಂತ್ರಿಕತೆಯ ಬೇಸರವನ್ನು ನೀಗಿಸಿಕೊಳ್ಳಬಯಸುವವರು ಇಲ್ಲಿ ದಿನಗಳನ್ನು ಆರಾಮವಾಗಿ ಕಳೆಯಬಹುದು. ರಾತ್ರಿ ತಂಗಲೂ ಸಹ ವ್ಯವಸ್ಥೆಯಿದೆ.
ಇಲ್ಲಿಂದ ನಮ್ಮ ಪಯಣ ಕಲ್ಲಹಳ್ಳಿ ಶ್ರೀನಿವಾಸನ ಬಳಿ ಸಾಗಿತು. ಅದಾಗಲೇ ಇಳಿಗೆಂಪು ಕಳೆದು ಕತ್ತಲೆಯ ಬೆಸುಗೆಯಾಗಿತ್ತು. ೮೦೦ ವರ್ಷಗಳ ಹಳೆಯ ಶ್ರೀನಿವಾಸನ ದೇಗುಲದಲ್ಲಿ ಅವನ ದರ್ಶನ ಪಡೆದೆವು. ಅಭಯಹಸ್ತನಾದ ಪುಟ್ಟ ಸುಂದರಮೂರ್ತಿಯನ್ನು ಕಣ್ಮನ ತುಂಬಿಕೊಂಡೆವು. ಪ್ರಸಾದ ಸ್ವೀಕರಿಸಿ ಮನೆಯತ್ತ ನಡೆದಾಗ ಕಡುಕತ್ತಲಾಗಿತ್ತು. ಚಂದ್ರೋದಯವಾಗತೊಡಗಿತ್ತು.
ಮುಂಜಾನೆಯಿಂದ ಮುಸ್ಸಂಜೆಯವರೆಗಿನ ಪಯಣದಲಿ ನಾವನುಭವಿಸಿ ಉಂಡದ್ದು ಭಗವತ್ಸಾನಿಧ್ಯದ ದಿವ್ಯರಸದೂಟ. ಮರೆಯಲಾಗದ ರಸದಚಿಲುಮೆಯಷ್ಟೆ.