ಗವಿ ಗಂಗಾಧರೇಶ್ವರ ದೇಗುಲ
ಫೋಟೋಗ್ರಫಿ : ವಸಿಷ್ಠ
ಬಹಳ ದಿನಗಳಿಂದ ಗವಿ ಗಂಗಾಧರೇಶ್ವರನ ದೇಗುಲಕ್ಕೆ ಹೋಗುವ ತುಡಿತವಿತ್ತು. ೨೭ ರ ಭಾನುವಾರ ಕಾಲ ಕೂಡಿಬಂತು. ಚುಮು ಚುಮು ಎಂದು ಕೊರೆಯುವ ಛಳಿಯಲ್ಲಿಸಂಜೆ ೭ ರ ಹೊತ್ತಿಗೆ ಬೆಚ್ಚಗೆ ಕಾರಿನಲ್ಲಿ ಕುಳಿತು ಹೊರಟೆವು. ಉತ್ತರಹಳ್ಳಿಯಿಂದ ಗವಿಪುರಂ ಕಡೆಗೆ.
ಬಸವನಗುಡಿಯ ಒಂದು ಭಾಗ ಗವಿಪುರಂ ಬಡಾವಣೆ. ಅಲ್ಲಿಯೇ ಬಹಳ ಪ್ರಾಚೀನವಾದ ಸುಮಾರು ೯ನೇ ಶತಮಾನಕ್ಕೆ ಸೇರಿದ್ದು ಎನ್ನಲಾದ ಗವಿ ಗಂಗಾಧರೇಶ್ವರ ದೇವಾಲಯವಿದೆ. ಕೆ.ಆರ್ ಮಾರುಕಟ್ಟೆಗೆ ೪-೫ ಕಿ.ಮೀಟರ್ ದೂರದಲ್ಲಿದೆ.
ಒಂದು ಪ್ರತೀತಿಯೆಂದರೆ ಗೌತಮ ಮಹರ್ಷಿಗಳು ಇಲ್ಲಿರುವ ಗಂಗಾಧರೇಶ್ವರ ಲಿಂಗಕ್ಕೆ ಮೂರು ಭಾರಿ ಅರ್ಘ್ಯ ಕೊಟ್ಟು ಪ್ರಾರ್ತಿಸಿದರು ಎಂದು. ಸಣ್ಣ ಬೆಟ್ಟದಗುಹೆ ಒಳಗೆ ಈಶ್ವರನ ಲಿಂಗವಿರುವುದರಿಂದ ಗವಿ ಗಂಗಧಾರೇಶ್ವರ ಎಂಬ ಹೆಸರು ಬಂದಿದೆ. ಸಮಮಟ್ಟವಾದ ದಿಬ್ಬ ಸ್ಥಳದಿಂದ ಮೆಟ್ಟಿಲು ಇಳಿದರೆ ನೇರ ಗುಹೆಯ ಒಳಗೆ ಇರುತ್ತೇವೆ. ದೇಗುಲದ ಮುಂದೆ ಎತ್ತರವಾದ ಕಲ್ಗಂಬ ಹಾಗೂ ಕಂಚಿನ ನಂದೀಕಂಬವಿದೆ. ದೇಗುಲದ ಮುಂದಿನ ಮಂಟಪದ ಕಂಬಗಳು ವಿಜಯನಗರದ ಅರಸರ ಶೈಲಿಯದಾಗಿದೆ. ಮತ್ತೊಂದು ಸಂಶೋಧನೆಯ ಅನ್ವಯ - ಮಂಟಪವನ್ನು ಸೂರ್ಯಪನ ಮತ್ತಿ ಚಂದ್ರಪನ ಎಂಬ ಎರಡು ಅಧಾರ ಸ್ಥಂಬಗಳಿಂದ ವಿನ್ಯಾಸಗೊಳಿಸಲಾಗಿದೆ. ಅದಕ್ಕೆ ಇರುವ ಅಧಾರ ಸ್ಥಂಬಗಳನ್ನು ವಿನ್ಯಾಸಗೊಳಿಸಿದ ರೀತಿಯು ಎರಡು ಬಸವಗಳು ಕುಳಿತಿರುವ ರೀತಿಯಲ್ಲಿದೆ. ಇದನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕು.
ಈ ದೇಗುಲದ ವಿಶೇಷವೇನೆಂದರೆ ಜನವರಿ ೧೪ ರಂದು ಬರುವ ಮಕರಸಂಕ್ರಾಂತಿಯಂದು ಸೂರ್ಯನ ಪ್ರಥಮ ಕಿರಣಗಳು ದಕ್ಷಿಣ ಪಶ್ಚಿಮದ ಕಿಟಕಿಗಳಿಂದ ತೂರಿಕೊಂಡು ನಂದಿಯ ಎರಡು ಕೊಂಬುಗಳ ಮಧ್ಯೆ ಹಾಯ್ದು ಲಿಂಗದ ಮೇಲೆ ಬೀಳುತ್ತದೆ. (ಸುಮಾರು ಹದಿನೈದು ನಿಮಿಷಗಳ ಕಾಲ ) ಆ ದೃಶ್ಯ ನೋಡಲು ಅಭೂತಪೂರ್ವವಾಗಿರುತ್ತದೆ. ನೂರಾರು ಜನ ಅಂದು ದೇಗುಲದಲ್ಲಿ ನೆರೆದು ಆ ಮನೋಹರ ದೃಶ್ಯವೈಶಿಷ್ಟ್ಯವನ್ನು ಕಣ್ಮನದಲ್ಲಿ ತುಂಬಿಕೊಳ್ಳಬಯಸುತ್ತಾರೆ.
ಇತ್ತೀಚಿನ ಸಂಶೋಧನೆಯೆಂದರೆ ನವಂಬರ್ ೩೦ ಹಾಗೂ ಡಿಸಂಬರ್ ೧ ನೇ ದಿನಾಂಕದಂದೂ ಸಹ ಈ ದೃಶ್ಯ ನಮಗೆ ನೋಡಲು ಸಿಗುತ್ತದೆ ಎನ್ನುವುದು. ಗಂಗಾಧರೇಶ್ವರನ ಮುಂದಿನ ಅಕ್ಕ-ಪಕ್ಕಗಳ ಕಂಬಗಳ ಎಡಬಲಗಳಲ್ಲಿ ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ ಗಣೇಶ ಮತ್ತು ಬಾಲ ಸುಬ್ರಹ್ಮಣ್ಯನ ಸುಂದರ ಶಿಲ್ಪಗಳು ಅರಳಿನಿಂತು ಭಕ್ತರ ಕಣ್ ಸೆಳೆಯುತ್ತವೆ.
ಇನ್ನು ಈಶ್ವರನ ಬಲ ಭಾಗದಲ್ಲಿ ಗುಹೆಯ ಒಳಗೆ ಪೂರ್ಣ ಮೈಯನ್ನು ಬಗ್ಗಿಸಿ ನಡೆದರೆ ಮನಸೂರೆಗೊಳ್ಳುವ ಮೋಹಕ ನಗೆಯಿಂದ ಕೂಡಿ ಬೆಳಗುತ್ತಿರುವ ಆಳೆತ್ತರದ ಪಾರ್ವತಿ ಅಮ್ಮನ ಶಿಲಾಮೂರ್ತಿ ಇರುವುದು. ತಾಯಿ ಎಷ್ಟು ಪ್ರಸನ್ನವದನಳಾಗಿದ್ದಳೆಂದರೆ ದೇಗುಲಕ್ಕೆ ಗಂಗಾಧರೇಶ್ವರದೇಗುಲ ಎಂಬ ಹೆಸರಲ್ಲದೆ ಪ್ರಸನ್ನ ಪಾರ್ವತೀ ಪರಮೇಶ್ವ ದೇಗುಲ ಎಂಬ ಹೆಸರೂ ಪ್ರಸಿದ್ಧವಾಗಿದೆ. ನಗುತ್ತಿರುವ ಪಾರ್ವತೀ ಅಮ್ಮನನ್ನು ಮನತುಂಬಿಕೊಂಡು ಬಗ್ಗಿ ತಗ್ಗಿ ನಡೆಯುತ್ತಾ ಹೋದರೆ ಗೌತಮ ಹಾಗೂ ಭರದ್ವಾಜ ಮಹರ್ಷಿಗಳ ಮೂರ್ತಿಗಳು ಕಂಡುಬರುತ್ತವೆ. ಇನ್ನೂ ಒಳಗೆ ಹೋದರೆ ಸೌಮ್ಯದುರ್ಗಿಯು ಕಾಣಸಿಗುತ್ತಾಳೆ. ಅಲ್ಲದೆ ವಲ್ಲಭೆಯೊಡನೆ ಕುಳಿತಿರುವ ರುದ್ರದೇವ, ಶಕ್ತಿಗಣಪ ಮುಂತಾದ ಮೂರ್ತಿಗಳಿವೆ. ದೇಗುಲದ ಪ್ರಾರಂಭದ ಮಂಟಪದ ಬಲಭಾಗದಲ್ಲಿ ಆಚಿಜನೇಯ, ಲಕ್ಷ್ಮೀನಾರಾಯಣ, ಷಣ್ಮುಕ ಮುಂತಾದ ಬಹು ಸುಂದರವಾದ ಮೂರ್ತಿಗಳನ್ನು ಕೆತ್ತಿದ್ದಾರೆ.
ಹೀಗೆ ಈ ದೇಗುಲದ ದರ್ಶನ ಮಾಡುತ್ತಾ ಹೋದಂತೆ ನಮ್ಮ ಮನವು ಭಕ್ತಿಪರವಶತೆಯಿಂದ ತುಂಬಿ ನಾವು ಪ್ರಸನ್ನವದನರಾಗಿ ಹೊರಬರುತ್ತೇವೆ ಎಂಬುದಂತೂ ನಿಜ.