Wednesday, May 11, 2011

Yashwant Deshpande's Drama - "All the Best"



ಲೇಖಕರು:   ರಜನಿ

ಬರಹಕ್ಕೆ:    ಜಗನ್ನಾಥ



ಅಂದು ಒಂದ್ಸಂಜೆ ನನ್ನ ಮಗ ಆಫೀಸ್ನಿಂದ ಬಂದಾಗ ಬಹಳ ಉತ್ಸಾಹದಲ್ಲಿದ್ದಂತೆ ಕಂಡ. ಏನೋ! ಈವತ್ತು ಇಷ್ಟೊಂದು ಖುಷಿ ಕಾಣಿಸ್ತಿದೆ, ನಿನ್ನ ಮುಖದಲ್ಲೀಂದೆ. ಅವನ ಮುಖ ಮತ್ತಷ್ಟು ಬೆಳಗ್ತು.

ಅಮ್ಮಾ, ನಾಳೆಯಿಂದ ನಾಲ್ಕು ದಿನ ರಜಾ ಮಜಾಂದ. ಓಹೋ! ಇದಾ ನಿನ್ನ ಉತ್ಸಾಹಕ್ಕೆ ಕಾರ್ಣ ಎಂದೆ. ಅದಕ್ಕವನು ನಿನಗೆ ಅಲ್ ದಿ ಬೆಸ್ಟ್ ಅಂದಾಗ ನನಗೆ ಅಚ್ಚರಿ - ನಾನೇನು ಪರೀಕ್ಷೆಗೆ ಹೋಗ್ತಿದ್ದೀನಾ ಎಂದೆ ಅರ್ಥವಾಗದೆ.
ಅಯ್ಯೋ ಅಮ್ಮಾ ಆಲ್ ದಿ ಬೆಸ್ಟ್ ನಾಟಕದ ಪ್ರದರ್ಶನ ನಡೀತಾ ಇದೆ ರವೀಂದ್ರ ಕಲಾಕ್ಷೆತ್ರದಲ್ಲಿ, ಅದಕ್ಕೆ ನಿನ್ನನ್ನ ಕರ್ಕಂಡುಹೋಗ್ತೀನಿ ಅಂದಾಗ ನಿಜವಾಗ್ಲೂ ಸಂತೋಷ ಆಯ್ತು. ನಾಟ್ಕ ನೋಡಿ ಬಹಳ ದಿವ್ಸ ಆಗಿದೆ, ನಡೀ ಈವತ್ತೇ ಸಂಜೆ ಹೋಗೋಣಾಂದೆ. ನನಗೆ ರವೀಂದ್ರ ಕಲಾಕ್ಷೇತ್ರವನ್ನೂ ನೋಡೋ ಹಂಬ್ಲನೂ ಇತ್ತಲ್ವೆ?

ನಾನು, ಮಗ, ಮಗಳು, ಮೊಮ್ಮಗಳು ಎಲ್ಲರೂ ಸಂಜೆ ರ. ಕಲಾಮಂದ್ರಕ್ಕೆ ಸಂಜೆ ೬=೦೦ ಘಂಟೆ ಷೋಗೆ ಹೋದ್ವು.ಉಚಿತ ಪ್ರವೇಶ ಅಲ್ವೆ. ನಮ್ಮ ಮನೇಯಿಂದ ಅಲ್ಲಿಗೆ ಹೋಗಿ ಬರೋಕೆ ಸ್ವಲ್ಪ ಮಾತ್ರ ಖರ್ಚು ಅಲ್ವೇ.


ಕೇಂದ್ರ ಸಾಹಿತ್ಯ ಅಕಾಡಮಿ ಸಂಸ್ಥೆಯವರು ಉಚಿತ ನಾಟಕ ಪ್ರದರ್ಶನ ಆಯೋಜಿಸಿದ್ರು. ಸಿನಿಮಾ ಧಾರವಾಹಿಗಳಲ್ಲಿ ನಟಿಸುವ ಬಿ.ವಿ.ರಾಜಾರಾಂ ನಾಟಕದ ರೂವಾರಿಯಾಗಿದ್ದು ಎಲ್ವೂ ಅಚ್ಕಟ್ಟಾಗಿತ್ತು. ಮೂಲ ಮರಾಠೀ ನಾಟಕಾನ ಕನ್ನಡಿಕರಿಸಿ ನಿರ್ದೇಶನ ಮಾಡ್ದ್ದವ್ರು ಯಶವಂತ ದೇಶಪಾಂಡೆ. ಅವರ ನಿರ್ದೇಶನದಲ್ಲಿ ನಾಟ್ಕ ೬೦೦ ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ ಅಂದ್ರೆ ನಿಜಕ್ಕೂ ಹೆಮ್ಮೆ ವಿಚಾರ ಅಲ್ವೆ.

ಒಬ್ಬ ಕಿವ್ಡ, ಒಬ್ಬ ಮೂಗ, ಒಬ್ಬ ಕುರ್ಡ ಒಂದೇ ಸೂರಿನಡೀಲಿ ವಾಸಿಸ್ತಾ ಇರ್ತಾರೆ. ಮೂರೂ ಜನ ಬಹಳ ಬುದ್ಧಿವಂತ್ರು, ಪ್ರತಿಭಾವಂತ್ರು. ಆದರೆ ಅವ್ರೆಲ್ಲಾ ತಮ್ಮ ತಮ್ಮ ಅಂಗವಿಕಲತೆಯನ್ನೇ ನೆನೀತಾ ಮಾನಸಿಕವಾಗಿ ದುರ್ಬಲರಾಗ್ತಾರೆ. ಅಕಸ್ಮಾತ್ತಾಗಿ ಕುರುಡನಿಗೆ ಒಬ್ಳು ಆದರ್ಶ ಹುಡ್ಗಿಯ ಭೇಟಿ ಆಗ್ತದೆ. ಮನೆಗೆ ಬಂದು ಮೂವರನ್ನೂ ಭೇಟಿ ಆಗ್ತಾಳೆ. ಅವರ ಪ್ರತಿಭೆ ಗುರ್ತ್ಸಿ ಅವರ ಕೀಳರಿಮೆ ತೆಗೆದು ಜೀವನ್ದಲ್ಲಿ ಮುಂದೆ ಬರ್ಲು ಪ್ರೋತ್ಸಾಹಿಸ್ತಾಳೆ. ಅವರೋ ತಮ್ತಮ್ಮ ಮನಸ್ನಲ್ಲಿ ಅವ್ಳು ತನ್ನನ್ನೇ ಪ್ರೀತಿಸ್ತಿದ್ದಾಳೆ ಅಂಥ ಭಾವಿಸ್ತಾ ಅವಳು ಬಂದಾಗ್ಲೆಲ್ಲಾ ವಿಪರೀತ ಸಂಭ್ರಮ ತೋರಿಸ್ತಾ ತಮ್ಮ ಅಂಗದೋಷ ಮರಿಸ್ತಾ ಅವಳ ಒಲುವನ್ನ ಗಳಿಸೋ ತರಾತುರೀಲಿ ಅವರು ಮಾಡೋ ಅಂಗಚೇಷ್ಟೆ, ನಡೆ, ನುಡಿಗಳು ಅದೆಷ್ಟು ಹಾಸ್ಯಮಯವಾಗಿತ್ತೂಂದ್ರೆ ನಮಗೆ ನಕ್ಕೂ ನಕ್ಕೂ ಹೊಟ್ಟೆ ಹಿಡ್ಕೋಂಡ್ಬಿಡ್ತು. ಇಡೀ ರಂಗಮಂದ್ರ ನಗೆಗಡ್ಲಲ್ಲಿ ಮುಳುಗಿತ್ತು. ಉತ್ತರ ಕರ್ನಾಟಕದ ಕನ್ನಡ ಭಾಷೆ ವೈಖರಿಯೇ ಆ ನಾಟ್ಕದ ಜೀವಾಳ. ಅವರಾಡೋ ಭಾಷೆ ಸೊಗಡು ಅವರು ಮಾಡ್ತಿದ್ದ ಅಂಗಚೇಷ್ಟೆಗೆ ಸರಿಯಾಗಿ ಹೊಂದುತ್ತಿತ್ತಾದ್ರಿಂದ  ನಾಟ್ಕ ವಿಜೃಂಭಿಸಲು ಸಹಾಯಕವಾಗ್ತಿದೆ ಅನ್ನಿಸ್ತು.

ಅಂತ್ಯದಲ್ಲಿ ಆ ಮೂವರೂ ನಾಯ್ಕಿಯ ಬಳೀಲಿ ತಮ್ಮ ಒಲುವನ್ನ ಹೇಳ್ಕೊಲ್ತಾರೆ. ಆಗ ಆ ನಾಯ್ಕಿ ಅವರ್ನ ನಿರಾಶೆಗೊಳಿಸೋದಕ್ಕೆ  ಕ್ಷಮೆ ಕೇಳ್ತಾ ತಾನು ಎರಡೂ ಕಾಲ್ಗಳಿಲ್ಲದ ಒಬ್ಬನನ್ನ ಮದುವೆ ಆಗ್ತಿರೋದಾಗಿ ತಿಳಿಸ್ತಾಳೆ. ಅವರನ್ನ ಸ್ನೇಹಿತರಾಗಿ ಭಾವಿಸಿ ಅವರ ಪ್ರತಿಭೆ ಗುರ್ತ್ಸಿ ಸಮಾಜ್ದಲ್ಲಿ ಮುಂದೆ ಬರೋಕೆ ಪ್ರೋತ್ಸ್ಶಿಸೋದೇ ತನ್ನ ಉದ್ದೇಶ ಆಗಿತ್ತು ಅಂಥ ತಿಳಿಸ್ತಾಳೆ. ಅಂಗ ದೋಷ ಏನೇ ಇದ್ರೂ ಅದನ್ನೇ ದೊಡ್ದು ಮಾಡ್ಕೊಂಡು ಕೀಳರಿಮೆಯಿಂದ ಬಳಲೋದು ಬಿಟ್ಟು ಇರೋ ಪ್ರತಿಭೆ ಗುರಿತಿಸ್ಕೊಂಡು ಸಾಧನೆ ಹಾದೀಲಿ ಸಾಗಬೇಕು ಅನ್ನೋದನ್ನ ನಮ್ಗೂ (ಸಮಾಜಕ್ಕೂ) ಸಾರ್ತಾಳೆ. ಒಂದು ಸುಂದರ ಸಂದೇಶನ ಹಾಸ್ಯದ ಔತಣದಲ್ಲೇ ಉಣಬಡಿಸಿದೋರು ಯಶವಂತ ದೇಶಪಾಂಡೆ. ಕುರುಡನ ಪಾತ್ರಧಾರಿ, ಕಿವುಡನ ಪಾತ್ರಧಾರಿ (ಸ್ವತಃ ಯಶವಂತ ದೇಶಪಾಂಡೆ) ಹಾಗೂ ಮೂಕನ ಪಾತ್ರಧಾರಿಗಳು ನಾಟ್ಕಕ್ಕೆ ಜೀವ ತುಂಬಿದ್ರು.

ನಾಯಕಿಯ ಪಾತ್ರದಲ್ಲಿ ಸಿನಿಮಾಗಳಲ್ಲಿ ನಟಿಸೋ ಕಲಾವಿದೆ ಮಾಲತಿ ದೇಶಪಾಂಡೆ ಸೊಗಸಾಗಿ ನಿರಾಯಾಸವಾಗಿ ನಟಿಸಿದ್ರು. ನಾಟ್ಕ ನೋಡಿ ನಿಜ ಅರ್ಥದಲ್ಲಿ ಆನಂದಿಸಿ ಮನೆ ಕಡೆ ಹೆಜ್ಜೆ ಹಾಕ್ದಾಗ ಮನಸ್ಸು ಹೂನಂತೆ ಅರಳಿತ್ತು.


Photo courtesy : http://naatakapaataka.wordpress.com/