Saturday, June 28, 2008

ನಮ್ಮ ತಿರುಪತಿ ಪ್ರಯಾಣ

ನಮಸ್ಕಾರ,
ನಾವು (ನನ್ನ ತಂದೆ ತಾಯಿ, ಅಕ್ಕ ಅವಳ ಮಗಳು ಹಾಗು ನಾನು)ತಿರುಪತಿಗೆ ಹೂಗಿದ್ದೆವು. ಅದರ ಒಂದು ಪ್ರವಾಸನ ಕಥನ ನನ್ನ ತಾಯಿಯವರಿಂದ ..
ತಿರುಪತಿ ... ತಿರುಮಲ ... ವೇಂಕಟೇಶ

ಕಲಿಯುಗದಲ್ಲಿ ಕಲ್ಕಿ ಅವತಾರವೆತ್ತಿರುವ ತಿರುಪತಿ ತಿಮ್ಮಪ್ಪನ ದರುಶನ ಭಾಗ್ಯಕ್ಕೆ ಹಂಬಲಿಸದ ಭಕ್ತರೇ ಇಲ್ಲ. ಅವನ ಹುಂಡಿಯಲ್ಲಿ ಹಣದ ಹೊಳೆಯ ರಭಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಅಂತೆಯೇ ಭಕ್ತರ ಧಾವಿಸುವಿಕೆಯೂ ಹೆಚ್ಚಾಗುತ್ತಿದೆ.
ಮೇ ಒಂದರ ಗುರುವಾರ ರಾತ್ರಿಯ ಬಸ್ಸಿಗೆ ನಾನು ನಮ್ಮ ಮನೆಯವರು, ಮಗ ಮಗಳೂ ಮೊಮ್ಮಗಳು ಹೀಗೆ ಎಲ್ಲರೂ ಹೊರಟೆವು. ರಾತ್ರಿ ಹೊರಡಬೇಕೆಂದು ಸಂಜೆ ಷಾಪಿಂಗ್ ಮತ್ತು ಪ್ಯಾಕಿಂಗ್ ಎಲ್ಲಾ ಮುಗಿಸಿದೆವು. ಅನಿರೀಕ್ಷಿತವಾಗಿ ಹೊರಟದ್ದರಿಂದ ಹೋಟಲ್ ವ್ಯವಸ್ಥೆ ಆಗಿರಲಿಲ್ಲ. ಹೋಟಲ್ ರೂಂ ಏನಾದರೂ ಸಿಗುತ್ತದೋ ಇಲ್ಲವೋ ಎನ್ನುವ ಆತಂಕ. ಆದರೆ ಮಗ ಮಗಳು ಧೈರ್ಯ ನೀಡಿದರು. ಬೆಂಗಳೂರಿನಿಂದ ತಿರುಪತಿಗೆ ಎಷ್ಟು ದೀರ್ಘ ಪ್ರಯಾಣ!!

ಅಂತೂ ಇಂತೂ ಬೆಳಗಿನ ಜಾವ ೪ ಗಂಟೆಗೆ ತಿರುಮಲವನ್ನು ತಲುಪಿದೆವು. ಇಳಿದ ಕ್ಷಣದಲ್ಲೇ ವಸತಿಗೃಹಕ್ಕಾಗಿ ತಿರುಗಾಡಿದರೆ ೨ - ೩ ವಸತಿಗೃಹಗಳಲ್ಲಿ ಭರ್ತಿಯಾಗಿ ಕೋಣೆಯೇ ಇಲ್ಲಾ ಎಂದರು. ಇನ್ಯಾರೋ ಹೇಳಿದರು ನೀವು ತಿರುಪತಿ ದರ್ಶನಕ್ಕೆ ಹೋಗಲು ಕೆಳಗಡೆಯೇ ಕ್ಯೂ ನಿಂತು ಟಿಕೆಟ್ ತೆಗೆದುಕೊಂಡು ನಂತರ ರೂಂಗೆ ಹೋಗಿ ಇಲ್ಲದಿದ್ದರೆ ೨ ದಿನವಾದ್ರೂ ತಿಮ್ಮಪ್ಪನ ದರ್ಶನವಾಗಲ್ಲಾಂತೆ. ಆದ್ರೆ ನಾವಿದ್ದ ಪರಿಸ್ಥಿತಿಯಲ್ಲಿ ಸಧ್ಯ ಒಂದು ಕೋಣೆ ಸಿಕ್ಕಿ ಸುಧಾರಿಸಿಕೊಳ್ಳುವಾ ಎಂದಾಗಿತ್ತು. ಅಷ್ಟರಲ್ಲಿ ಒಬ್ಬ ಆಟೋ ಡ್ರೈವರ್ ಬಂದ. ಅವನೇ ರೂಂ ಬೇಕಾ ಎಂದು ಕೇಳಿದ. ಆತುರವಾಗಿ ಹೂಂ ಎಂದೆವು. ಅವನು ಬಸ್ ಸ್ಟ್ಯಾಂಡ್‌ಗೆ ಸ್ವಲ್ಪವೇ ದೂರದಲ್ಲಿರುವ ಲಾಡ್ಜ್‌ಗೆ ಕರೆದೊಯ್ದ - ಮೂರು ಸುತ್ತು ಮಹಡಿ ಮೆಟ್ಟಲನ್ನು ಹತ್ತಿಸಿದ. ಕಡೆಗೂ ಒಂದು ರೂಂ ಸಿಕ್ತು. ಸರಿ ಸ್ವಲ್ಪ ಫ್ರೆಶ್ ಆಗಿ ನಾವು ಬುಸ್ ಸ್ಟ್ಯಾಂಡ್ನ್‌ಲ್ಲಿನ ಕ್ಯೂಗೆ ಹೋಗಿ ಸೇರಿದೆವು. ಇಷ್ಟಾಗುವಾಗ ಬೆಳಗಿನ ೫-೩೦ ಆಗಿತ್ತು. ನಿಂತ್ವಿ ನಿಂತ್ವಿ ಗಂಟೆ ೭ ಆಯಿತು, ೮ ಆಯಿತು, ೯ ಆಯಿತು. ಹನುಮಂತನ ಬಾಲದ ತುದಿಯಲ್ಲಿ ನಾವಿದ್ವೇನೋಪ್ಪಾ !!

ಎಣಿಸಲಾಗದ ಹಣವನ್ನು ಹುಂಡಿಯಲ್ಲಿ ಕಾಣುವ ದೇವಸ್ಥಾನದ ಆಡಳಿತ ವರ್ಗದವರು ಇಲ್ಲಿ ಬೇಕಾದಶ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ ನಿಜ. ಆದರೂ ತಿರುಮಲ ಬಸ್ ನಿಲ್ದಾಣದಲ್ಲಿ ನಿಂತಿದ್ದ ನಮ್ಮ ಪಕ್ಕದಲ್ಲಿ ವೈತರಣಿ ನದಿಯಂತೆ ದುರ್ವಾಸನೆ ಬೀರುತ್ತಾ ಚರಂಡಿಯ ನೀರು ಹರಿಯುತ್ತಿತ್ತು. ಭಕ್ತರು ಬಾಯಿ ಮುಚ್ಚಿಕೊಂಡು ಟಿಕೇಟು ಪಡೆಯಲು ನಿಂತಿದ್ದರು. ಅದನ್ನು ಸರಿಪಡಿಸಿ ಉದ್ದಕ್ಕೆ ಸಣ್ಣ ಕಲ್ಲುಬೆಂಚನ್ನು ಹಾಕಿಸಿದರೆ ಎಳೆಕಂದಮ್ಮಗಳಿಗೆ, ಬಸುರಿ ಹೆಂಗಸರಿಗೆ ವೃದ್ಧರಿಗೆ ಕುಳಿತು ವಿಶ್ರಮಿಸುತ್ತಾ ಸರದಿಯಲ್ಲಿ ಹೋಗಲೂ ಅನುಕೂಲವಾಗುತ್ತಿತ್ತು.













ಅಂತೂ ಕಡೆಗೆ ೧೧ ರ ಸಮಯಕ್ಕೆ ಕೌಂಟರ್ ಹತ್ತಿರ ಬಂದೆವು. ಇದ್ದಕ್ಕಿದ್ದಂತೆ ನಮ್ಮ ಮುಂದೆ ನಿಂತಿದ್ದವರು ಎಲ್ಲಿಗೋ ಓಡತೊಡಗಿದರು. ಯಾಕೆ ಹೀಗೆ ಎಂದು ನಾವು ಅಚ್ಚರಿಗೆ ಒಳಗಾದೆವು. ಪೊಲೀಸ್ ಪೇದೆನ ಕೇಳಿದಾಗ ಇಲ್ಲಿ ೫೦ ರೂ ಟಿಕೆಟ್ ಮುಗಿದಿದೆ. ಎಲ್ಲಾ ಶ್ರೀನಿವಾಸಂಗೆ(ಛತ್ರ) ಓಡಿ ಬೇಗ, ಅಲ್ಲಿ ನಿಮಗೆ ೧೦೦, ೨೦೦ ರೂಗಳ ಟಿಕೇಟ್ ಸಿಗಬಹುದು ಅಂದ. ನಮಗಂತು ನಿರಾಶೆ, ಕೋಪ ಎಲ್ಲಾ ಒಟ್ಟಿಗೆ ನುಗ್ಗಿ ಬಂತು. ಆದರೂ ಸಮಯವಿರದೆ ರೇಗಾಡಿಕೊಂಡು ಶ್ರೀನಿವಾಸಂಗೆ ಓಡಿದೆವು. ನಾವು ಅಲ್ಲಿಗೆ ಹೋಗುವಷ್ಟರಲ್ಲಿ ಅಲ್ಲಾಗಲೇ ಹನುಮಂತನ ಬಾಲದಂತೆ ಕ್ಯೂ ನಿಂತಿತ್ತು ಜನಸಾಗರ. ಸರಿ ನಾವೂ ಹೋಗಿ ನಿಂತೆವು. ಇಷ್ಟರಲ್ಲಾಗಲೇ ೧೧ ಗಂಟೇಯಾಗಿತ್ತು.ಪಕ್ಕದವರಿಗೆ ತಿಳಿಸಿ ವಿಪರೀತ ಹಸಿದಿದ್ದ ನಾವು ಎದುರಿಗೇ ಇದ್ದ ಹೋಟೆಲ್ ಗೆ ಹೋಗಿ ಉಪಹಾರ ಮುಗಿಸಿ ಬಂದೆವು. ಸ್ವಲ್ಪ ಸುಧಾರಿಸಿದಂತಾಯಿತು. ಜೊತೆಗೆ ಅಲ್ಲಿ ನೆರಳಿತ್ತು. ಆಂದ್ರದ ಸುಡುಬಿಸಿಲಿನ ಧಾಳಿಯಿಂದ ಸ್ವಲ್ಪ ಬಿಡುಗಡೆಯಾಯಿತು.ಇಲ್ಲೂ ನಿರಾಶೆಯೇನೋ ಎನಿಸುತ್ತಿತ್ತು, ಅಂತೂ ಇಂತೂ ೧ ಗಂಟೆಗೆ ನಮಗೆ ಟಿಕೆಟ್ ಸಿಕ್ಕಿತು. ಶ್ರೀನಿವಾಸನೇ ಸಿಕ್ಕಿಬಿಟ್ಟನೇನೋ ಎನ್ನುವಷ್ಟು ಸಂತೋಷವಾಯಿತು ಅಲ್ಲೂ ೧೦೦ ರೂಗಳ ಟಿಕೆಟ್ ಮುಗಿದು ನಮಗೆ ಸಿಕ್ಕಿದ್ದು ೨೦೦ ರೂಗಳದ್ದು. ಒಬ್ಬೊಬ್ಬರಿಗೆ ಒಂದೊಂದೇ ಟಿಕೆಟ್, ಹೆಬ್ಬೆಟ್ ನ ಮುದ್ರೆ ತೆಗೆದು ಪೋಟೋ ತೆಗೆದುಕೊಂಡು ಕೊಡುತ್ತಿದ್ದರು. ಬಿಗಿ ಭದ್ರತೆಯ ಕ್ರಮವಾಗಿತ್ತು ಅದು. ಹೋಟೆಲ್ ರೂಂ ಗೆ ಹಿಂತಿರುಗಿ ಊಟ ಮಾಡಿ ಸ್ವಲ್ಪ ಹೊತ್ತು ಮಲಗಿದೆವು. ನಮ್ಮ ಟಿಕೆಟ್ ನಲ್ಲಿ ದರ್ಶನ (ತಿರುಪತಿಯಲ್ಲಿ) ಮಾರನೇ ದಿನ ಬೆಳಿಗ್ಗೆ ೪ ಗಂಟೆಗೆ ಎಂದಿತ್ತು. ಬಿಸಿಲಿನ ಝಳ ತಾಳಲಾರದೆ ರೂಮಿನಲ್ಲೆ ವಿಶ್ರಮಿಸಿ, ೫ ಗಂಟೆಯ ಸಮಯಕ್ಕೆ ಆಟೋ ತೆಗೆದುಕೊಂಡು ತಿರುಮಲದಲ್ಲಿ (ಗೋವಿಂದರಾಜನ ಪಟ್ಟಣದಲ್ಲಿರುವ) ಇರುವ ಮುಖ್ಯ ದೇವಸ್ಥಾನಗಳಿಗೆ ಹೊದೆವು.

ಜಲಪಾತದಂತೆ ಭೋರ್ಗರೆದು ಸುರಿವ ನೀರು ಕೊಳದಲ್ಲಿ ಶೇಖರವಾಗುತ್ತದೆ. ಅದರ ದಡದಲ್ಲೇ ಅತ್ಯಂತ ಸುಂದರವಾದ ಕಪಿಲ ತೀರ್ಥೇಶ್ವರ ಪಾರ್ವತೀ ದೇಗುಲವಿದೆ.






















ಅದರ ವಿಶಾಲವಾದ ಮುಂಭಾಗದ ಆಂಗಳದಲ್ಲಿ ಒಳಗಿಂದೊಳಗೆ ಕಟ್ಟಿಸಿದಂತ ವೇಣುಗೋಪಾಲಸ್ವಾಮಿ, ಅಭಯ ಆಂಜನೇಯ, ಗಣಪತಿಯ ದೇಗುಲಗಳಿವೆ. ಸುಂದರವಾದ ಆ ಪರಿಸರದಲ್ಲಿ ಸೊಗಸಾಗಿ ಪೂಜಾಕಾರ್ಯಗಳು ಜರುಗಿದವು. ಇವೆಲ್ಲ ನಮ್ಮ ಮನಸ್ಸಿಗೆ ತಂಪೆರದವು. ಪ್ರಸಾದವೂ ಬೇಕಾದಷ್ಟು ಸಿಕ್ಕಿತು. ಅಲ್ಲಿಂದ ಮುಂದೆ ಇಸ್ಕಾನ್ ರಾಧಾಕೃಷ್ಣರ ದೇಗುಲಕ್ಕೆ ಹೋದೆವು. ಆಲ್ಲಿ ಆಡಂಭರವಾದ ಹೊನ್ನಿನ ಬಣ್ಣದ ಕವಚಗಳಿಂದ ವಿಶೇಷವಾಗಿ ಅಲಂಕೃತಗೊಂಡು ಕಂಗೊಳಿಸುತ್ತಿದ್ದ ಆ ಭವ್ಯ ಪರಿಸರ, ಸುಂದರ ನೋಟಕ್ಕೆ ಮಾರುಹೋದೆವು.



















ಮನಸ್ಸು ಬಹಳ ಸಂಭ್ರಮಗೊಂಡಿತ್ತು. ಅಷ್ಟರಲ್ಲಾಗಲೇ ಸಂಜೆಯಾಗಿತ್ತು. ಅಲ್ಲಿಂದ ಮುಂದೆ ಅತಿ ಪುರಾತನವಾದ ಬೇಟೆ ವೇಂಕಟೇಶ್ವರ ದೇವಲಕ್ಕೆ ಹೋದೆವು. (ಶ್ರೀನಿವಾಸ ಮಂಗಾಪುರ ಎಂದು ಕರೆಯುತ್ತಾರೆ.) ಇಲ್ಲಿಯೂ ಜನಜಂಗುಳಿ ಇತ್ತು. ಆದರೂ ಮನಮೋಹಕವಾದ ಶ್ರೀನಿವಾಸನ ದರ್ಶನ ಚೆನ್ನಾಗೇ ಆಯಿತು. ಪ್ರಸಾದವೂ ದೊರೆಕಿತು. ಆಕರ್ಶಕ ಚಲುವಿನಿಂದ ಕಂಗೊಳಿಸುತ್ತಿದ್ದ ಆ ಶ್ರೀನಿವಾಸನ ಭವ್ಯ ಮೂರ್ತಿಯ ಸೌಂದರ್ಯಕ್ಕೆ ಮನಸ್ಸು ಮಾರು ಹೋಗಿತ್ತು. ಅಲ್ಲಿಂದ ಮುಂದೆ ಅತಿ ಪುರತನವಾದ ಅಗಸ್ತೇಶ್ವರ ದೇಗುಲಕ್ಕೆ ಹೋಗಿ ಅಲ್ಲಿ ಈಶ್ವರನ ದರ್ಶನ ಪಡೆದೆವು. ಇಲ್ಲಿ ಈಶವರನ ಲಿಂಗವು ಬಲಭಾಗಕ್ಕೆ ತಿರುಗಿತ್ತು. ಸಾಮಾನ್ಯವಾಗಿ ಎಲ್ಲೆಡೆ ನಮ್ಮ ಬಲಗಡೆಗೆ ಅದರ ಮೂರ್ತಿಯ ತುದಿ ತಿರುಗಿರುವುದನ್ನು ನೋಡುತ್ತೇವೆ ಅಲ್ಲವಾ? ಲಿಂಗಕ್ಕೆ ಪೂರ್ತಿ ರುದ್ರಾಕ್ಷಿಹಾರಗಳಿಂದ ಅಲಂಕರಿಸಿದ್ದರು. ಅಲ್ಲಿಯೂ ಪ್ರಸಾದ ಸ್ವೀಕರಿಸಿ ನಂತರ ತಿರುಚಾನೂರು (ಅಲಮೇಲು ಮಂಗಾಪುರ) ಕಡೆಗೆ ಧಾವಿಸಿದೆವು. ಅಲ್ಲಿ ಪದ್ಮಾವತಿ ನೆಲೆಸಿದ್ದಾಳೆ. ಶ್ರೀನಿವಾಸನ ಹೃದಯದ ರಾಣಿಯಾದ ತಾಯಿ ಪದ್ಮಾವತಿಯ ದರುಶನಕ್ಕೆ ಹೋದೆವು. ಅಲ್ಲಿಯೂ ಸಾಕಷ್ಟು ಕ್ಯೂ ಇತ್ತು. ಆದರೂ ನಮಗೆ ಬೇಗನೆ ದರ್ಶನ, ಕುಂಕುಮ ಪ್ರಸಾದ ದೊರಕಿತು. ತಾವರೆ ಹೂಗಳೂ ಗುಲಾಬಿಯ ಹಾರಗಳನ್ನು ತಾಯಿಗೆ ನೀಡಿದೆವು. ವಜ್ರದ ಒಡವೆಗಳಿಂದ ಅಲಂಕೃತಳಾದ ಆ ತಾಯಿಯ ಸೌಂದರ್ಯವಂತೂ ಅನ್ಯಾದೃಶ್ಯವಾಗಿತ್ತು. ಅಷ್ಟೊತ್ತಿಗೆ ರಾತ್ರಿ ೧೦ ಗಂಟೆಯಾಗಿತ್ತು. ದೇಹಕ್ಕೆ ದಣಿವು ಆದರೆ ಮನಸ್ಸು ಬಹಳ ಮುದವಾಗಿತ್ತು. ಎಲ್ಲರಿಗೂ ಸಂತೋಷವಾಗಿತ್ತು. ಬೆಳಗಿನ ಸುಸ್ತು ಮಾಯವಾಗಿತ್ತು. ಅಂದು ರಾತ್ರಿ ೨-೩೦ ಕ್ಕೆ ಎದ್ದು ಸ್ನಾನಾದಿಗಳನ್ನು ಮುಗಿಸಿ ೩ ಗಂಟೆ ಬಸ್ಸಿಗೆ ತಿರುಪತಿಗೆ ಹೋದೆವು. ನಾಲ್ಕರ ಸುಮಾರಿಗೆಲ್ಲಾ ತಿಮ್ಮಪ್ಪನ ಸನ್ನಿಧಿಯಲ್ಲಿದ್ದೆವು. ನಾವು ಸರದಿ ಸಾಲಿನಲ್ಲಿ ಸೇರಿದೆವು. ಏನೋ ಹೇಗೋ ಸ್ವಲ್ಪವೂ ದಣಿವಾಗದಂತೆ ತಿಮ್ಮಪ್ಪನ ದರ್ಶನ ಭಾಗ್ಯ ಸಿಕ್ಕಿತು. ಬೆಳಿಗ್ಗೆ ೫-೩೦ ಕ್ಕೆಲ್ಲಾ ನಾವು ಹರಕೆ ಸಲ್ಲಿಸಿ, ಲಾಡು ಪ್ರಸಾದ ಪಡೆದು ತೃಪ್ತಿಯ ಮನಸ್ಸಿನಿಂದ ಹೊರಬಂದೆವು. ನಂತರ ಉಪಹಾರ ಮುಗಿಸಿಕೊಂಡು ಕೆಳಗೆ ತಿರುಮಲಕ್ಕೆ ಬಂದೆವು. ಇನ್ನೂ ಬಹಳ ಸಮಯವಿತ್ತಾದ್ದರಿಂದ ಎಲ್ಲರೂ ಹತ್ತಿರದಲ್ಲೇ ಇದ್ದ ಗೋವಿಂದರಾಜಸ್ವಾಮಿಯ ದರುಶನ ಪಡೆದು ಪಕ್ಕದಲ್ಲಿಯೇ ಇದ್ದ ಆಂಡಾಳ್ ತಾಯಿ, ಲಕ್ಷ್ಮೀ ತಾಯಿ, ಪಾರ್ಥಸಾರಥಿ ಪೆರುಮಾಳ್, ವರಾಹಸ್ವಮಿ, ಆಳ್ವಾರರುಗಳು ಹೀಗೆ ಎಲ್ಲರ ದರುಶನ ಭಾಗ್ಯ ಪಡೆದು ರುಚಿಯಾದ ಮೊಸರನ್ನ ಪ್ರಸಾದ ಸ್ವೀಕರಿಸಿ ಆನಂದದಿಂದ ರೂಂಗೆ ಹಿಂತಿರುಗಿದೆವು. ಊಟಮಾಡಿ ಬೆಂಗಳೂರಿನ ಬಸ್ಸಿನಲ್ಲಿ ಕುಳಿತಾಗ ಮನಸ್ಸು ಧನ್ಯತಾ ಭಾವದಿಂದ ಮಿಡಿಯುತ್ತಿತ್ತು.
ನಿಮ್ಮ ರಜನಿ
(ಬರಹಕ್ಕೆ ವಸಿಷ್ಠ)